1982ರಲ್ಲಿ ನ್ಯಾ. ಪಾಟೀಲರ ಪತ್ನಿ ಏನು ಮಾಡಿದರು ಗೊತ್ತಾ?

'2006ರಲ್ಲಿ ಅಂದರೆ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿ ಸ್ಥಾನದಿಂದ ನಿವೃತ್ತಿಯಾದ ಬಳಿಕ ನನ್ನ ಪತ್ನಿಯು ನಾಗವಾರದಲ್ಲಿ ವೈಯಾಲ್‌ಕಾವಲ್ ಹೌಸಿಂಗ್ ಸೊಸೈಟಿಯಿಂದ ನಿವೇಶನವೊಂದನ್ನು ಖರೀದಿಸಿದ್ದರು. ಈ ನಡುವೆ 1982ರಲ್ಲಿ ಪತ್ನಿ ಸಹೋದರ ಶಿವರಾಜ್ ಎಂಬವರು ವೈಯಾಲ್‌ಕಾವಲ್ ಹೌಸಿಂಗ್ ಸೊಸೈಟಿ ಸದಸ್ಯರಾಗಿದ್ದು, ಸೊಸೈಟಿ ನಿರ್ಮಿಸಿದ ಲೇಔಟ್‌ನಲ್ಲಿ ನಿವೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿ ಸ್ವಲ್ಪ ಹಣವನ್ನೂ ಪಾವತಿಸಿದ್ದರು'.
'ಆದರೆ ಈ ಸೊಸೈಟಿ ನಾನಾ ಕಾರಣಗಳಿಂದಾಗಿ ಸುಮಾರು 20 ವರ್ಷಗಳಿಂದ ಬಡಾವಣೆ ನಿರ್ಮಿಸಿ ತನ್ನ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡುವುದಕ್ಕೆ ವಿಫಲವಾಗಿತ್ತು. ಈ ಕಾರಣದಿಂದ ಪಾವತಿಸಿದ್ದ ಹಣವನ್ನು ವಾಪಸ್ ನೀಡುವಂತೆ ಪತ್ನಿ ಸಹೋದರ ಕೇಳಿಕೊಂಡಿದ್ದರು. ಅಲ್ಲದೆ ಸುಮಾರು 2700 ಸದಸ್ಯರು ಕೂಡ ತಮ್ಮ ಹಣವನ್ನು ವಾಪಸ್ ನೀಡುವಂತೆ ಕೋರಿದ್ದರು.'
'ಈ ಸೊಸೈಟಿ ಬ್ಯಾಂಕ್‌ಗಳಿಂದ ಸಾಲ ಪಡೆದು ಬಳಿಕ ಮರು ಪಾವತಿಸದೆ ಸುಸ್ತಿದಾರ ಎನಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸೊಸೈಟಿ ವಶದಲ್ಲಿದ್ದ ಜಮೀನನ್ನೇ ಸಾಲ ವಸೂಲಿಗೆ ಪರ್ಯಾಯವಾಗಿಸಿಕೊಂಡಿತ್ತು. ಆಗ, ಹಣ ಪಾವತಿಸಿದ್ದ ಸದಸ್ಯರಿಗೆ ನಿವೇಶನ ಪಡೆಯುವ ಬಗ್ಗೆ ಭೀತಿ ಶುರುವಾಯಿತು. ಆಗ ಸೊಸೈಟಿಯು ನಿವೇಶನ ಮಾರಾಟ ಮಾಡುವುದಕ್ಕೆ ಸರ್ಕಾರದಿಂದ ನೆರವು ಕೇಳಿತ್ತು. ಅದರಂತೆ ಮುಂದೆ ಸೈಟ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಪತ್ನಿ ಸಹೋದರ ಆ ಬಡಾವಣೆಯಲ್ಲಿ ಅಪಾರ್ಟ್‌ಮೆಂಟ್ ಖರೀದಿಸಲು ಹಣ ಹೂಡಿಕೆ ಮಾಡಿದರು'.
'ಬಳಿಕ ತನ್ನ ಸದಸ್ಯತ್ವವನ್ನು ನನ್ನ ಹೆಂಡತಿ ಹೆಸರಿಗೆ ವರ್ಗಾಯಿಸಿದರು. ಬಳಿಕ ಸಹ ಸದಸ್ಯೆಯನ್ನಾಗಿ ಮಾಡಿ ಆಕೆ ಹೆಸರಿನಲ್ಲಿ ಸೇಲ್ ಡೀಡ್ ಮಾಡಿಕೊಳ್ಳಲಾಯಿತು. ಗಮನಾರ್ಹವೆಂದರೆ, ನನ್ನ ಹೆಂಡತಿ ಈ ಖರೀದಿಯಲ್ಲಿ ಯಾವುದೇ ಅವ್ಯವಹಾರ ಅಥವಾ ಸುಳ್ಳು ಪ್ರಮಾಣ ಪತ್ರವನ್ನು ಸಲ್ಲಿಸಿಲ್ಲ. ಈ ಖರೀದಿ ಕಾನೂನು ಪ್ರಕಾರವೇ ಆಗಿದೆ.'
'ಲೋಕಾಯುಕ್ತನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸ್ವಯಂ ಪ್ರೇರಣೆಯಿಂದ ನನ್ನ ಆಸ್ತಿ ಘೋಷಣೆ ಮಾಡಿದ್ದೇನೆ. ಆದರೆ ನನ್ನ ವಿರುದ್ಧ ಆರೋಪ ಬಂದಾಗ ಹೆಂಡತಿ ಹೆಸರಿನಲ್ಲಿದ್ದ ನಿವೇಶನವನ್ನು ಹಿಂತಿರುಗಿಸುವಂತೆ ಹೇಳಿದೆ. ಆ ಪ್ರಕಾರ ಸೆ.14ರಂದು ಆ ನಿವೇಶನವನ್ನು ವಾಪಸ್ ನೀಡಿದೆ. ಆದರೆ ಆ ನಿವೇಶನವನ್ನು ಹಿಂತಿರುಗಿದ ತಕ್ಷಣಕ್ಕೆ ನಾನು ಮತ್ತು ನನ್ನ ಕುಟುಂಬ ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿದ್ದೇನೆ ಎಂಬಂತೆ ಬಿಂಬಿಸಲಾಯಿತು. ಇದು ನನಗೆ ತುಂಬಾ ಬೇಸರ ಮತ್ತು ಆಶ್ಚರ್ಯವುಂಟು ಮಾಡಿದೆ'.
'ನಾನು ವಕೀಲ ವೃತ್ತಿಯಿಂದ ಹಿಡಿದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ತನಕ ಎಲ್ಲ ಹುದ್ದೆಗಳಲ್ಲಿಯೂ ತುಂಬಾ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ಇಲ್ಲಿತನಕ ವಹಿಸಿದ್ದ ಎಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಇತ್ತೀಚೆಗೆ ಲೋಕಾಯುಕ್ತನಾಗಿ ಅಧಿಕಾರ ವಹಿಸಿಕೊಂಡಾಗಲೂ ಅದೇ ಮಾದರಿಯಲ್ಲಿ ಕಾರ್ಯವೈಖರಿ ಮುಂದುವರಿಸುತ್ತಿದ್ದೆ. ಮೊನ್ನೆಯಷ್ಟೇ ರಾಜ್ಯ ಪ್ರವಾಸ ಆರಂಭಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ನನ್ನ ಮೇಲೆ ಬಂದಿರುವ ಈ ಆರೋಪ ತುಂಬಾ ಘಾಸಿಯುಂಟು ಮಾಡಿದೆ'.
'ಈ ದೋಷ ಪ್ರೇರಿತ ಪ್ರಚಾರ ನನಗೆ ತೀವ್ರ ನೋವು ಮತ್ತು ದುಃಖ ಉಂಟು ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡುವುದು ಸೂಕ್ತ ಎಂದು ಅನಿಸಿದೆ. ಆದರೆ ನನ್ನ ವಿರುದ್ಧ ಕೆಲವರು ಮಾಡಿರುವ ಇಂಥ ಷಡ್ಯಂತರಕ್ಕೆ ಬಲಿಯಾಗಿ ಮತ್ತು ರಾಜ್ಯದ ಜನರು ನನ್ನಲ್ಲಿ ಇಟ್ಟಿರುವ ನಂಬಿಕೆ, ಅಶೋತ್ತರಗಳನ್ನು ಈಡೇರಿಸಲಾಗದೆ ರಾಜೀನಾಮೆ ನೀಡುತ್ತಿದ್ದೇನೆಯೇ? ಎನ್ನುವ ನೋವು ಕಾಡುತ್ತಿದೆ.'












Click it and Unblock the Notifications