ಕಟ್ಟಾಗೆ ಕೆಟ್ಟ ಕ್ಯಾನ್ಸರ್: ವಿಕ್ಟೋರಿಯಾ ಆರ್ಎಂಓ ಡಾ. ತಿಲಕ್

ಇನ್ನು, ಕಟ್ಟಾ ಜೈಲಿನಿಂದ ಮುಕ್ತಿ ಪಡೆದು, ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುವ ವಿಷಯದಲ್ಲಿ ಮಹತ್ತರ ಪಾತ್ರವಹಿಸಿರುವ ವಿಕ್ಟೋರಿಯಾ ಆಸ್ಪತ್ರೆಯ ಆರ್ಎಂಓ ಕಟ್ಟಾಗೆ ಇರುವ ವ್ಯಾಧಿಯನ್ನು ರಟ್ಟು ಮಾಡಿದ್ದಾರೆ. ಕಟ್ಟಾ ಸುಬ್ರಮಣ್ಯಗೆ ರಕ್ತ ಕ್ಯಾನ್ಸರ್ ಇರುವ ಗೌಪ್ಯ ವಿಷಯ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೆಐಎಡಿಬಿ ಭೂ ಹಗರಣ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ರಕ್ತ ಕ್ಯಾನ್ಸರ್ (ಲಿಂಫೋ ಕ್ಯಾನ್ಸರ್) ಇರುವುದನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ತಡವಾಗಿ ಖಚಿತಪಡಿಸಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಈ ಸಂಬಂಧ ವರದಿಯನ್ನು ಸಲ್ಲಿಸಿದ್ದಾರೆ.
ಕಟ್ಟಾ ಸುಬ್ರಹ್ಮಣ್ಯಗೆ ಸ್ಪೈನಲ್ ಕಾರ್ಡ್‌ನಲ್ಲಿ (ಬೆನ್ನು ಮೂಳೆ) ತೊಂದರೆ ಇರುವುದರಿಂದ ಶಸ್ತ್ರ ಚಿಕಿತ್ಸೆಗೊಳಪಡಿಸಲು ಅನುಮತಿ ನೀಡಬೇಕೆಂದು ಜೈಲು ಅಧೀಕ್ಷಕರಿಗೆ ವೈದ್ಯರು ಈ ಹಿಂದೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕರು ನ್ಯಾಯಾಲಯದ ಅನುಮತಿ ಪಡೆದಿದ್ದರು. ಆದರೆ ಮೂರು ದಿನ ಕಳೆದರೂ ಕಟ್ಟಾಗೆ ಶಸ್ತ್ರ ಚಿಕಿತ್ಸೆ ಮಾಡಿರಲಿಲ್ಲ.
ಏಕೆ ಶಸ್ತ್ರ ಚಿಕಿತ್ಸೆ ಮಾಡಿಲ್ಲ, ಅನುಮತಿ ಪಡೆದಿದ್ದೇಕೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರಿಗೆ ತಾಕೀತು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕಟ್ಟಾಗಿರುವ ಕಾಯಿಲೆ ಕುರಿತು ವಿಕ್ಟೋರಿಯಾ ಆಸ್ಪತ್ರೆ ಆರ್ಎಂಓ ಡಾ. ತಿಲಕ್, ಶನಿವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. 2004ರಿಂದ ಕಟ್ಟಾಗೆ ರಕ್ತ ಕ್ಯಾನ್ಸರ್ ಇದ್ದು, ಇದಕ್ಕೆ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಸೂಕ್ತ ಚಿಕಿತ್ಸೆ ಇಲ್ಲದೆ ಅವರಿಗೆ ರಕ್ತ ಕ್ಯಾನ್ಸರ್ ಉಲ್ಬಣಗೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಸ್ಪೈನಲ್ ಕಾರ್ಡ್ ಕುರಿತು ಮತ್ತೂಮ್ಮೆ ಪರಿಶೀಲನೆ ನಡೆಸಿದ್ದು, ಈ ತೊಂದರೆಯನ್ನು ಔಷಧಿ ಮೂಲಕವೇ ನಿಯಂತ್ರಿಸಲು ಯತ್ನಿಸುವುದಾಗಿ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಆದರೆ ಕಟ್ಟಾಗಿರುವ ರಕ್ತ ಕ್ಯಾನ್ಸರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಈ ಕಾಯಿಲೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಬಹುದೆಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.












Click it and Unblock the Notifications