ರೆಡ್ಡಿಗಳ ಮೇಲಿನ ದಾಳಿಯಲ್ಲಿ ಸಿಬಿಐಗೆ ಮಿಶ್ರಫಲ

ಜನಾರ್ದನ ರೆಡ್ಡಿ ಚಾಲಕ ಬಾಷಾ ಇರುವ ಅನಂತಪುರದ ಮನೆಯ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು 10 ಲಕ್ಷ ರು. ವಶಪಡಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಪ್ರಸಾದ್ ಮತ್ತು ಕೃಷ್ಣಮೂರ್ತಿ ಎಂಬಿಬ್ಬರ ಮನೆ ಮೇಲೆಯೂ ದಾಳಿ ನಡೆದಿದೆ. ಅವರಿಬ್ಬರ ಮನೆಯಿಂದ 2 ಕೆಜಿ ಬೆಳ್ಳಿ ಮತ್ತು ಸೂಟ್ ಕೇಸ್ ತುಂಬ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಜನಾರ್ದನ ರೆಡ್ಡಿಯ ಅಳಿಯ ರಾಜಗೋಪಾಲ ರೆಡ್ಡಿ ಅವರ ಮನೆ ಮೇಲೆ ಕೂಡ ದಾಳಿ ನಡೆದಿದ್ದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ತಮ್ಮ ಸುಪರ್ದಿಗೆ ಸಿಬಿಐ ಅಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಚಿನ್ನಾಭರಣ ಪತ್ತೆ : ಆಕ್ಸಿಸ್ ಬ್ಯಾಂಕ್ ನಲ್ಲಿ ಶ್ರೀನಿವಾಸ ರೆಡ್ಡಿ ಮತ್ತು ಅವರ ಕುಟಂಬಕ್ಕೆ ಸೇರಿದ ಲಾಕರ್ ಗಳಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ನಗದು ಮತ್ತು ಆಭರಣಗಳ ಪ್ರಮಾಣ ಎಷ್ಟು ಎಂದು ಇನ್ನೂ ಬಹಿರಂಗಪಡಿಸಲಾಗಿಲ್ಲ. ಲಾಕರ್ ತೆಗೆಯುವ ಕಾರ್ಯ ಇನ್ನೂ ಸಾಗಿದ್ದು, ಐದು ಲಾಕರ್ ಗಳನ್ನು ಇನ್ನೂ ಜಾಲಾಡಬೇಕಿದೆ.
ಖಾಲಿ ಕೈಯಲ್ಲಿ ಮರಳಿದ ಅಧಿಕಾರಿಗಳು : ಗಣಿರೆಡ್ಡಿಗಳ ಆಪ್ತರಲ್ಲಿ ಕಾಣಿಸಿಕೊಂಡಿದ್ದ ಜೆಡಿಎಸ್ ಮೂಲದ, ಬಿಜೆಪಿ ಸೇರಿದ್ದ ಆನಂದಚೌಧರಿ ಮಾಲೀಕತ್ವದ ಕುರುಗೋಡುನ ಶ್ರೀ ದೊಡ್ಡಬಸವೇಶ್ವರ ರೈಲ್‌ಮಿಲ್ ಮೇಲೆ ಸಿಬಿಐ ಅಧಿಕಾರಿಗಳು ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದಾಳಿ ನಡೆಸಿ 9 ಗಂಟೆಗೆಲ್ಲಾ ಪೂರ್ಣಗೊಳಿಸಿ ಬರಿಗೈಲಿ ಹಿಂದಿರುಗಿದ್ದಾರೆ.












Click it and Unblock the Notifications