ರೆಡ್ಡಿಗೆ ಸಿಬಿಐ ಗಾಳ: 'ಆಪರೇಶನ್' ಪಕ್ಷಾಂತರಿಗಳು ಕಂಗಾಲು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರವನ್ನು ಉಳಿಸುವ ಉದ್ದೇಶದಿಂದ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಲಾಯಿತು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಬಿಐ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾರೆ ಎಂದು ಹಬ್ಬಿರುವ ಮಾಹಿತಿ ಬಹುತೇಕ ಶಾಸಕರನ್ನು ಕಂಗೆಡಿಸಿದೆ.
ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಬಿಜೆಪಿಗೆ ಬಂದ ಶಾಸಕರಿಗೆ ನೀಡಿದ 'ಪ್ರಸಾದ"ದ ವಿವರವನ್ನು ಜನಾರ್ದನ ರೆಡ್ಡಿ ಸಿಬಿಐ ಮುಂದೆ ಬಹಿರಂಗಪಡಿಸಿದ್ದಾರೆ ಎಂದು ಹೇಳಲಾಗಿದೆ. ವಿಶೇಷ ನ್ಯಾಯಾಲಯದ ಆದೇಶದಂತೆ ಸಿಬಿಐ ವಶದಲ್ಲಿರುವ ರೆಡ್ಡಿ, ಕಳೆದ ಮೂರು ದಿನಗಳಿಂದ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಮಗೆ ಬಂದ ಗಣಿ ಹಣವನ್ನು ಎಲ್ಲೆಲ್ಲಿ ಬಂಡವಾಳವಾಗಿ ಹೂಡಲಾಗಿದೆ, ಈ ಹಣವನ್ನು ರಾಜಕೀಯಕ್ಕೆ ಹೇಗೆ ಬಳಸಿಕೊಳ್ಳಲಾಗಿದೆ, ತಮ್ಮಿಂದ ಲಾಭ ಪಡೆದ ಮುಖಂಡರ ಬಗ್ಗೆಯೂ ಅವರು ವಿವರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications