ಮೈಸೂರು ಇನ್ನು ಮುಂದೆ ಭಿಕ್ಷುಕಮುಕ್ತ ನಗರ...?

ದಸರಾ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಮೈಸೂರು ನಗರವನ್ನು ಭಿಕ್ಷುಕರ ಮುಕ್ತ ನಗರವನ್ನಾಗಿಸಲು ಜಿಲ್ಲಾಡಳಿತ ಸಂಕಲ್ಪ ಮಾಡಿದೆ. ಈ ಹಿನ್ನಲೆಯಲ್ಲಿ ಪೊಲೀಸರ ಮೂಲಕ ನಗರದಲ್ಲಿ ಕಂಡು ಬರುವ ಭಿಕ್ಷುಕರನ್ನು ಹಿಡಿದು ಜ್ಯೋತಿನಗರದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಲಾಗುತ್ತಿದೆ.
ಹಿಂದೊಮ್ಮೆ ಅಧಿಕಾರಿಗಳು ನಗರದಲ್ಲಿರುವ ಭಿಕ್ಷುಕರನ್ನು ಹುಡುಕಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸುವ ಕೆಲಸವನ್ನು ಮಾಡಿದ್ದರು. ಈ ಸಂದರ್ಭ ಭಯಗೊಂಡ ಭಿಕ್ಷುಕರು ನಗರದತ್ತ ಬರಲು ಹೆದರುತ್ತಿದ್ದರು. ಇದೀಗ ಮತ್ತೆ ಬಸ್ ನಿಲ್ದಾಣ, ಪ್ರಮುಖ ರಸ್ತೆ, ವೃತ್ತಗಳು, ಸಿಗ್ನಲ್ ಲೈಟ್ ಬಳಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ. ವೃದ್ದರು, ಅಂಗವಿಕಲರು ಒಂದೆಡೆಯಾದರೆ ಮತ್ತೊಂದೆಡೆ ಗಟ್ಟಿಮುಟ್ಟಾದ ಹೆಂಗಸರು ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಭಿಕ್ಷೆ ಬೇಡುವುದು ಕಂಡು ಬರುತ್ತಿದೆ. ಇವರು ಮಕ್ಕಳನ್ನು ಕೂಡ ಭಿಕ್ಷಾಟನೆಗೆ ಬಿಡುತ್ತಿರುವುದು ದುರಂತವಾಗಿದೆ.
ದೂರದಿಂದ ಬರುವ ಪ್ರವಾಸಿಗರು ಅದರಲ್ಲಿಯೂ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಳ್ಳುವ ಭಿಕ್ಷುಕರು ಅವರನ್ನು ಅಡ್ಡಗಟ್ಟಿ ಮುಂದಕ್ಕೆ ಬಿಡದೆ ವಸೂಲಿ ಮಾಡುತ್ತಾರೆ. ಇದೊಂದು ಮುಜುಗರದ ಸಂಗತಿಯೂ ಹೌದು. ಇದನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಕ್ರಮಕೈಗೊಂಡಿದ್ದು ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಂಡು ಬರುವ ಭಿಕ್ಷುಕರನ್ನು ಗರುಡ ವಾಹನದಲ್ಲಿ ಕರೆದೊಯ್ದು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಿಡಲು ಸೂಚಿಸಲಾಗಿದೆ.
ಈಗಾಗಲೇ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸುಮಾರು ೧೧೩ಕ್ಕೂ ಹೆಚ್ಚಿನವರು ಆಶ್ರಯಪಡೆದಿದ್ದಾರೆ. ಆದರೆ ಭಿಕ್ಷುಕರು ಮಾತ್ರ ಇಲ್ಲಿರಲು ಇಷ್ಟಪಡುತ್ತಿಲ್ಲ. ಕಾರಣ ಭಿಕ್ಷೆ ಬೇಡಿ ಸಿಗರೇಟ್, ಮದ್ಯ ಸೇವಿಸುವವರಿಗೆ ಇಲ್ಲಿ ಅದು ಸಾಧ್ಯವಾಗದೇ ಇರುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದೀಗ ಭಿಕ್ಷುಕರನ್ನು ಹುಡುಕಿ ನಿರಾಶ್ರಿತರ ಪರಿಹಾರಕೇಂದ್ರಕ್ಕೆ ಒಪ್ಪಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿರುವುದರಿಂದ ಕೆಲವು ವೃತ್ತಿನಿರತ ಭಿಕ್ಷುಕರು ಮೈಸೂರು ನಗರದಿಂದ ಪಲಾಯನಗೈಯ್ಯುತ್ತಿದ್ದಾರೆ.
ಅದೇನೇ ಇರಲಿ ಜಿಲ್ಲಾಡಳಿತದ ಈ ಕ್ರಮ ಶ್ಲಾಘನೀಯವಾಗಿದ್ದು ಇನ್ನು ಮುಂದೆ ಪ್ರವಾಸಿ ಕೇಂದ್ರ, ದೇವಸ್ಥಾನ, ಪ್ರಮುಖ ರಸ್ತೆಗಳಲ್ಲಿ ಭಿಕ್ಷುಕರ ಕಿರಿಕಿರಿ ತಪ್ಪಲಿದ್ದು, ಪ್ರವಾಸಿಗರು ನಿರಾಳವಾಗಿ ಓಡಾಡಬಹುದಾಗಿದೆ.












Click it and Unblock the Notifications