ಅಂತೂ ನಾರಾಯಣ ಹೃದಯಾಲಯಕ್ಕೆ ಶ್ರೀಗುರು ದಾಖಲು

ಈ ಕುರಿತಂತೆ ಒನ್ ಇಂಡಿಯಾ ಕನ್ನಡದಲ್ಲಿ 'ದಾಖಲೆ ಬದಿಗಿಟ್ಟು ಚಿಕಿತ್ಸೆಗೆ ಮೊದಲಾಗಿ'ರೆಂದು ಆಗ್ರಹಿಸಿ ವರದಿ ಪ್ರಕಟವಾಗಿತ್ತು. ತೀವ್ರ ಹಣದ ಮುಗ್ಗಟ್ಟು ಎದುರಿಸುತ್ತಿರುವ ಅಲೆಮಾರಿ ಜನಾಂಗದ ಕುಂಚಕೊರವರ ಸಮುದಾಯದ ದುರ್ಗಪ್ಪ ಮತ್ತು ನಾಗಮ್ಮ ಜಿಲ್ಲಾಧಿಕಾರಿಗಳ ಕಚೇರಿ ಅಲೆದು ಸುಸ್ತಾಗಿದ್ದರು. ಈ ಕುರಿತು ವರದಿ ಪ್ರಕಟವಾದ ಬೆನ್ನಲ್ಲೆ ದಾನಿಗಳು ಶ್ರೀಗುರುವಿಗೆ ಮರುಜನ್ಮ ನೀಡಲು ಮುಂದಾಗಿದ್ದಾರೆ.
ಶಹಪೂರದ ತಹಶೀಲ್ದಾರರು ಮತದಾರರ ಚೀಟಿಯಲ್ಲಿ ತಪ್ಪಾಗಿ ನಮೂದಾಗಿದ್ದ ಹೆಸರನ್ನು ಸರಿಪಡಿಸಿ ಫ್ಯಾಕ್ಸ್ ಮುಖಾಂತರ ನಾರಾಯಣ ಹೃದಯಾಲಯಕ್ಕೆ ಕಳುಹಿಸಿದ್ದಾರೆ. ವಾಜಪೇಯಿ ಆರೋಗ್ಯ ಚಿಕಿತ್ಸೆ ಯೋಜನೆಯಡಿಯಲ್ಲಿ ನಾರಾಯಣ ಹೃದಯಾಲಯದಲ್ಲಿ ನಾಗಮ್ಮ ಹಾಗೂ ದುರ್ಗಪ್ಪ ದಂಪತಿ ತಮ್ಮ ಮಗವನ್ನು ಒಳರೋಗಿಯಾಗಿ ದಾಖಲಿಸಿದ್ದಾರೆ.
ನಾರಾಯಣ ಹೃದಯಾಲಯದ ವೈದ್ಯರು ಮಗುವಿಗೆ ನೆಗಡಿ ಹಾಗೂ ಜ್ವರವಿದ್ದ ಕಾರಣ ಮಗು ಸಂಪೂರ್ಣವಾಗಿ ಆರೋಗ್ಯವಾದ ಮೇಲೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹೇಳಿದ್ದಾರೆ. ದಾನಿಗಳಿಂದಲೂ ಕೂಡ ಆರ್ಥಿಕ ನೆರವು ಸಿಕ್ಕಿದ್ದು, ಮಗುವಿನ ಪಾಲಕರಲ್ಲಿ ಸಂತೋಷ ಹಾಗೂ ಬದುಕಿನ ಹೊಸ ಆಶಾಕಿರಣದೆ. ಆದಷ್ಟೂ ಬೇಗ ಶ್ರೀಗುರು ಗುಣಮುಖರಾಗಿ ತನ್ನ ತಂದೆ ತಾಯಿಯೊಂದಿಗೆ ಆರಾಮವಾಗಿರಲಿ ಎನ್ನುವುದು ನಮ್ಮ ಆಶಯ.












Click it and Unblock the Notifications