ಅವನತಿಯತ್ತ ಹೈದರಾಬಾದಿನ ಐಟಿ ಸಾಮ್ರಾಜ್ಯ

2007ರಲ್ಲಿ ಐಟಿ ಕ್ಷೇತ್ರ ಆರ್ಥಿಕ ಬಿಕ್ಕಟ್ಟು ಎದುರಿಸುವುದಕ್ಕೂ ಮುನ್ನ ಸುಮಾರು 50 ಸಾವಿರಕ್ಕೂ ಅಧಿಕ ನೇರ ನೇಮಕಾತಿ ಒದಗಿಸುತ್ತಿದ್ದ ಹೈದರಾಬಾದಿನ ಐಟಿ ಕಂಪನಿಗಳು 2010-11ರ ಹೊತ್ತಿಗೆ ಸಂಪೂರ್ಣ ಸೊರಗಿದವು. 50 ಸಾವಿರದ ಸಂಖ್ಯೆ 15 ಸಾವಿರಕ್ಕೆ ಇಳಿಯಿತು. ಐಟಿ ಹಾಗೂ ಐಟಿಯೇತರ ಕಂಪನಿಗಳು ಬೆಂಗಳೂರು ಹಾಗೂ ಚೆನ್ನೈ ಕಡೆ ಗುಳೆ ಎದ್ದವು. ಪದವಿ ಪಡೆದ ಇಂಜಿನಿಯರ್ ಗಳು ಬೆಂಗಳೂರು ಬೆಸ್ಟ್ ಎಂದು ಬಂದರು. ಈ ವಲಸೆ ಬೆಂಗಳೂರಿನ ಪಾಲಿಗೆ ಬಿಸಿತುಪ್ಪವಾಗುತ್ತಾ ಹೋಯಿತು.
ಒಂದಲ್ಲ ಎರಡಲ್ಲ ಎಲ್ಲಾ ಕಂಪನಿ ಗೋಳು:ಅಮೆರಿಕದ 4ನೇ ಅತಿದೊಡ್ಡ ಬ್ಯಾಂಕ್ ಎನಿಸಿರುವ ವೆಲ್ಸ್ ಫಾರ್ಗೋ ಬೆಂಗಳೂರಿಗೆ ಕಾಲಿರಿಸುವುದಕ್ಕೂ ಮುನ್ನ 2006ರಲ್ಲೇ ಹೈದರಾಬಾದಿನಲ್ಲಿ ನೆಲೆಸಿತ್ತು. ಆದರೆ, ಈಗ 2000ಕ್ಕೂ ಅಧಿಕ ಉದ್ಯೋಗಿಗಳು ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ರೀತಿ ಪಟ್ನಿ ಕೊಂಡುಕೊಂಡ ಐಗೇಟ್, ಟಿಸಿಎಸ್, ಇನ್ಫೋಸಿಸ್ ಹಾಗೂ ಕಾಂಗ್ನಿಜೆಂಟ್ ಕಂಪನಿಗಳು ಹೈದರಾಬಾದಿನಲ್ಲಿ ತಮ್ಮ ಸಂಸ್ಥೆ ವಿಸ್ತರಣೆ ಯೋಜನೆ ಕೈಬಿಟ್ಟಿದೆ. ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುತ್ತಾ ಬಂದಿವೆ. ಹೀಗಾಗಿ ಇಲ್ಲಿನ ಅಭ್ಯರ್ಥಿಗಳು ಬೆಂಗಳೂರು, ಚೆನ್ನೈಗೆ ವಲಸೆ ಬರುತ್ತಿದ್ದಾರೆ. ಪರಿಣಾಮ ಸ್ಥಳೀಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ತಾರತಮ್ಯವಾಗುತ್ತಿದೆ.
ನೇಮಕಾತಿಯಲ್ಲಿ ದಿಢೀರ್ ಕುಸಿತ : ಕಳೆದ ವರ್ಷ ಹೈದರಾಬಾದಿನ ಸುತ್ತಮತ್ತ ಕೇವಲ 6 ಮಿಲಿಯನ್ ಚದರ ಅಡಿ ಭೂಮಿ ಮಾತ್ರ ಐಟಿ ಹಾಗೂ ಐಟಿಯೇತರ ಕಂಪನಿಗಳ ಪಾಲಾಗಿದೆ. ಐಟಿ ಕ್ಷೇತ್ರದ ಅಲಿಖಿತ ನಿಯಮದ ಪ್ರಕಾರ ಪ್ರತಿ 100 ಚ.ಅಡಿಗೆ ಒಂದು ಕೆಲಸ ಸೃಷ್ಟಿಸಬೇಕಾಗುತ್ತದೆ. 2010-11ರಲ್ಲಿ ಸುಮಾರು 60,000 ಸಾವಿರ ಜನರನ್ನು ನೇಮಕಾತಿ ಮಾಡುವ ಕಡೆ 15,000 ಅಭ್ಯರ್ಥಿಗಳು ಮಾತ್ರ ಉದ್ಯೋಗ ಸೇರಿದ್ದಾರೆ.
ಸರ್ಕಾರಿ ಸ್ವಾಮ್ಯದ ಜವಹಾರ್ ಲಾಲ್ ಜ್ಞಾನ ಕೇಂದ್ರದ ಮೂಲಕ ಕ್ಯಾಂಪಸ್ ಸಂದರ್ಶನ ನಡೆಸಿದ 33 ಕಂಪನಿಗಳು 2009-10 ರಲ್ಲಿ 2,030 ಫ್ರೆಶರ್ ಗಳನ್ನು ಮಾತ್ರ ಆಯ್ಕೆ ಮಾಡಿದೆ. 2010-11 ರಲ್ಲಿ ಈ ಸಂಖ್ಯೆ 1,370ಕ್ಕೆ ಇಳಿದಿದೆ.
ಆಂಧ್ರದಲ್ಲಿ ಇರುವ ಟೆಕ್ಕಿ ತಲೆಗಳ ಲೆಕ್ಕ ಹಾಕಿದರೆ 2.7 ಲಕ್ಷ ದಾಟುವುದಿಲ್ಲ. ಅಚ್ಚರಿ ಎಂದರೆ ಕಳೆದ ಆರು ತಿಂಗಳಿನಲ್ಲಿ 4 ಮಿಲಿಯನ್ ಚದರ ಅಡಿ ಭೂ ಪ್ರದೇಶ ಐಟಿ ಕಂಪನಿಗಳಿಗೆ ಬುಕ್ ಆಗಿದೆ. ಆದರೆ ಸರಿಯಾದ ಅನುಪಾತದಂತೆ 40,000 ಅಧಿಕ ಉದ್ಯೋಗ ಸೃಷ್ಟಿಯಾಗಬೇಕು. ಆದರೆ, ಆ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ತೆಲಂಗಾಣ ಮೂಲದ ಪದವೀಧರರು ಬೆಂಗಳೂರು ಬಸ್ ಹತ್ತುವುದು ತಪ್ಪುತ್ತಿಲ್ಲ.












Click it and Unblock the Notifications