ಐಪಿಎಸ್ ಅಲೋಕ್ ಕುಮಾರ್ ಹೊರಟರು ನಕ್ಸಲ್ ಬೇಟೆಗೆ

ಉಡುಪಿಯಲ್ಲಿರುವ ನಕ್ಸಲ್ ನಿಗ್ರಹ ಪಡೆಯ ನೂತನ ಕಮಾಂಡರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿದೆ. ಅಲೋಕ್ ಕುಮಾರ್ ಮೂರು ವರ್ಷಗಳಿಂದ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತರಾಗಿ (ಅಪರಾಧ) ಸೇವೆ ಸಲ್ಲಿಸುತ್ತಿದ್ದು, ದಕ್ಷ ಅಧಿಕಾರಿ ಎಂಬ ಹೆಸರು ಗಳಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿರುವ ಡಿವಿ ಸದಾನಂದಗೌಡರೂ ಪ್ರಸ್ತುತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ನಕ್ಸಲೀಯರ ಸಮಸ್ಯೆಯನ್ನು ಚೆನ್ನಾಗಿ ಅರಿತಿರುವ ಡಿವಿಎಸ್, ನಕ್ಸಲೀಯ ಚಟುವಟಿಕೆಗಳನ್ನು ಮಟ್ಟ ಹಾಕುವ ಸಂಬಂಧ ಅಲೋಕ್ ಕುಮಾರ್ ಅವರನ್ನು ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥರನ್ನಾಗಿ ನೇಮಿಸಲು ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಇಬ್ಬರು ಆಯುಕ್ತರು ಸುಪರ್ದಿಗೆ: ಮಹಾನಗರದಲ್ಲಿ ಅಪರಾಧಗಳನ್ನು ಹತ್ತಿಕ್ಕುವ ಉದ್ದೇಶದಿಂದ ಬೆಂಗಳೂರು ನಗರಕ್ಕೆ ಇಬ್ಬರು ಜಂಟಿ ಪೊಲೀಸ್ ಆಯುಕ್ತರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮುಂದೆ ಇದನ್ನು ಪೂರ್ವ ಮತ್ತು ಪಶ್ಚಿಮ ಎಂದು ವಿಭಜಿಸಿ ಇಬ್ಬರನ್ನು ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದುವರೆಗೆ ಇಡೀ ನಗರಕ್ಕೆ ಒಬ್ಬ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಇದ್ದರು.
ಬಿ.ದಯಾನಂದ್ ಎಂಬುವರನ್ನು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ (ಅಪರಾಧ) ಮತ್ತು ಪ್ರಣಬ್ ಮೊಹಂತಿ ಅವರನ್ನು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರನ್ನಾಗಿ (ಅಪರಾಧ) ವರ್ಗಾಯಿಸಲಾಗಿದೆ.












Click it and Unblock the Notifications