ಸಚಿವ ಸಂಪುಟಕ್ಕೆ ರೆಡ್ಡಿಗಳ ಸೇರ್ಪಡೆ, ಆಚಾರ್ಯರೇ ದಿಕ್ಕು?

ಬಾಗಲಕೋಟೆ ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಕೃಷ್ಣಾನದಿಗೆ ಬಾಗಿನ ಅರ್ಪಿಸಲು ಆಲಮಟ್ಟಿಗೆ ತೆರಳುತ್ತಿದ್ದರು.
ಲೋಕಾಯುಕ್ತ ವರದಿ ಶಿಫಾರಸ್ಸಿನಲ್ಲಿ ಅಡಕವಾಗಿರುವ ಅಂಶಗಳ ಪ್ರಕಾರ ಗಣಿರೆಡ್ಡಿಗಳ ಕ್ಯಾಂಪಿನ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬಹುದೆ? ಬೇಡವೇ? ಎನ್ನುವ ವಿಚಾರವನ್ನು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಿ ವರದಿ ಕೊಡಬೇಕೆಂದು ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯರಿಗೆ ಸಿಎಂ ಕೇಳಿಕೊಂಡಿದ್ದಾರೆ.
ರಾಜ್ಯಪಾಲರು ಅಡ್ಡಿ?: ರೆಡ್ಡಿ ಸೋದರರ ಸಂಪುಟ ಸೇರ್ಪಡೆಗೆ ಬಿಜೆಪಿ ಅಧ್ಯಕ್ಷ ಗಡ್ಕರಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಸದಾನಂದ ಗೌಡರು ಈ ಕುರಿತಂತೆ ಲೀಗಲ್ ಒಪೀನಿಯನ್ ಕೇಳಿ ನಂತರ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಒಂದು ವೇಳೆ ಕರುಣಾಕರ ರೆಡ್ಡಿ ಮತ್ತು ಶ್ರಿ ರಾಮಲುವನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿವಿ ಆಚಾರ್ಯುರು ಗ್ರೀನ್ ಸಿಗ್ನಲ್ ಕೊಟ್ಟರೂ ರಾಜ್ಯಪಾಲರು ಅವರಿಗೆ ಪ್ರಮಾಣವಚನ ಬೋಧಿಸಲು ಒಪ್ಪಲಾರರು ಎನ್ನುವ ಸುದ್ದಿ ಇದೆ.
ಹಿಂದೊಮ್ಮೆ ರೆಡ್ಡಿಗಳ ವಿರುದ್ಧ ಸ್ವತಃ ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರಲ್ಲದೇ, ಬಳ್ಳಾರಿ ತ್ರಿಮೂರ್ತಿಗಳನ್ನು ಸಂಪುಟದಿಂದ ಕೈಬಿಡಲು ಯಡಿಯೂರಪ್ಪಗೆ ಒತ್ತಡ ಹಾಕಿದ್ದರು. ಇದೀಗ ಮತ್ತೆ ಅವರನ್ನು ಮಂತ್ರಿ ಆಗುವುದಕ್ಕೆ ಹಂಸರಾಜ್ ಭಾರಧ್ವಾಜರು ಅಡ್ಡಗಾಲು ಹಾಕುವ ಸಾಧ್ಯತೆಯಿದೆ.












Click it and Unblock the Notifications