ಸತ್ತೋನು ಎದ್ದುಬಂದ; ಪೊಲೀಸ್ ಗೆ ತಲೆನೋವು ತಂದ!

ಈ ಕಥೆಯ ನಾಯಕ ಹುಬ್ಬಳ್ಳಿ ಹೈದ 48 ರ ವಯಸ್ಸಿನ ಬಸವರಾಜ್ ಪಂಪಣ್ಣ ಬುಟ್ಟ. ಈತ ಹುಬ್ಬಳ್ಳಿಯ ನೇಕಾರನಗರದ ನಿವಾಸಿ. ಸತ್ತದ್ದು ಕಳೆದ ಸೋಮವಾರ ಹಾಗೂ ಬದುಕಿದ್ದು ನಿನ್ನೆ ಗುರುವಾರ!
ಸತ್ತು ಹೋಗಿದ್ದು ಹಾಗೂ ಬದುಕಿ ಬಂದದ್ದು ಎರಡೂ ಪವಾಡವೇನಲ್ಲದಿದ್ದರೂ ಬಲು ತಮಾಷೆಯಾಗಿದೆ, ಓದಿಕೊಳ್ಳಿ...
ಆಗಿದ್ದಿಷ್ಟು. ಬೆಂಗಳೂರಿಗೆ ಕೆಲಸ ಹುಡುಕಲು ರು. 650 ನ್ನು ಕೈಯಲ್ಲಿ ಹಿಡಿದು ಈ ಪಂಪಣ್ಣ ಮನೆಯವರಿಗೆ ಹೇಳದೇ ಬಂದಿದ್ದಾನೆ. ಕೆಲಸ ಸಿಗುವ ಮೊದಲೇ ಕೈಯಲ್ಲಿದ್ದ ದುಡ್ಡು ಖಾಲಿಯಾಗಿದೆ. ಅವರಿವರಲ್ಲಿ ಹಣ ಬೇಡಿಕೊಂಡು ವಾಪಸ್ ಊರಿಗೆ ಹೋಗಿ ತಲುಪುವ ಮೊದಲು ಮನೆಯವರಿಗ ಫೋನ್ ಕಾಲ್ ಕೂಡ ಮಾಡಲು ಆತನಿಗೆ ಸಾಧ್ಯವಾಗಿಲ್ಲ.
ಅಷ್ಟರಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಈತನಂತೆ ಎಡಗಾಲಿಗೆ 6 ಬೆರಳಿದ್ದ ಅಪರಿಚಿತ ವ್ಯಕ್ತಿ ಹುಬ್ಬಳ್ಳಿಯ ಕೆರೆಯೊಂದರಲ್ಲಿ ಸತ್ತುಬಿದ್ದಿದ್ದ. ಗುರುತಿಸದಷ್ಟು ಕೊಳೆತಿತ್ತು ಆ ಶವ. ಅದು ಪೊಲೀಸ್ ಕೇಸ್ ಆಗಿ ಈತನ ಮನೆಯವರು ಕಳೆದುಹೋಗಿದ್ದಾನೆಂದು ಕಂಪ್ಲೆಂಟ್ ಕೊಟ್ಟಿರುವುದಕ್ಕೆ ತಾಳೆಯಾಯಿತು. ಎಡಗಾಲಲ್ಲಿದ್ದ 6 ಬೆರಳೇ ಸಾಕ್ಷಿಯಾಗಿ ಆತನೇ ಈತನೆಂದು ತಿಳಿದು ಮನೆಯವರು ಕಳೆದ ಸೋಮವಾರ ಶವ ಸಂಸ್ಕಾರ ಮಾಡಿದ್ದೂ ಆಯ್ತು.
ಗುರುವಾರ ಬೆಂಗಳೂರಿನಿಂದ ಮರಳಿ ಊರು ಸೇರಿದ ಪಂಪಣ್ಣನ್ನು ಆತನ ಮನೆಯವರು ಗುರುತು ಹಿಡಿದು ಖುಷಿಯಾದರು. ಈಗ ಊರೆಲೆಲ್ಲ, ಸತ್ತು ಹೋಗಿದ್ದಾನೆಂದುಕೊಂಡವ ಬದುಕಿ ಬಂದದ್ದೇ ಸುದ್ದಿಯಾದರೆ ಪೊಲೀಸರಿಗೆ ನಿಜವಾಗಿ ಸತ್ತವನನ್ನು ಹುಡುಕುವುದು ತಲೆನೋವಾಗಿದೆ.
ಎಲ್ಲಾದರೂ ಹೇಳದೇ ಕೇಳದೇ ಹೋಗುವ ಮೊದಲು ಆಲೋಚಿಸಿ..!












Click it and Unblock the Notifications