ಲೋಕಾಯುಕ್ತ ಎಫೆಕ್ಟ್: ಭ್ರಷ್ಟ 'ಮಾಯಾ' ಸಚಿವ ರಾಜೀನಾಮೆ

ಪಶುಸಂಗೋಪನಾ ಖಾತೆ ಸಚಿವ ಅವಧ್‌ಪಾಲ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, ಜಮೀನ್ದಾರಿ ಪದ್ಧತಿ ನಿಷೇಧ ಮತ್ತು ಭೂ ಸುಧಾರಣಾ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಆದ್ದರಿಂದ ಅವರನ್ನು ಸಂಪುಟದಿಂದ ಕೈಬಿಡುವಂತೆ ಉತ್ತರ ಪ್ರದೇಶದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ. ಮೆಹ್ರೊತ್ರಾ ಮಂಗಳವಾರವಷ್ಟೇ ಶಿಫಾರಸು ಮಾಡಿದ್ದರು.
ಯಾದವ್ ವಿರುದ್ಧ 2007ರ ನಂತರ ದಾಖಲಾಗಿರುವ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಬಿ-ಸಿಐಡಿಯಂತಹ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದೂ ಅವರು ಶಿಫಾರಸು ಮಾಡಿದ್ದಾರೆ. ಯಾದವ್ ವಿರುದ್ಧ ಮೂರು ಕೊಲೆ ಪ್ರಕರಣಗಳು ದಾಖಲಾಗಿದೆ.
ಆದರೆ ಪೊಲೀಸರು ತನಿಖೆ ನಡೆಸದೆ ನಿಷ್ಕ್ರಿಯರಾಗಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಆದ್ದರಿಂದ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಸ್ವತಂತ್ರ ಸಂಸ್ಥೆಯೊಂದಕ್ಕೆ ವಹಿಸಬೇಕು ಎಂದು ಮೆಹ್ರೊತ್ರಾ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಯಾದವ್ ಸಚಿವರಾದ ಮೇಲೆ 250 ಪಶು ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ. ಇದರಲ್ಲಿ 32 ಚಿಕಿತ್ಸಾಲಯಗಳು ಅವರ ಕ್ಷೇತ್ರಕ್ಕೆ ಮಂಜೂರಾಗಿವೆ. ಈ 32 ಆಸ್ಪತ್ರೆಗಳಲ್ಲಿ 13 ಪಶು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಗುತ್ತಿಗೆಯನ್ನು ಅವರ ಮಗನ ಒಡೆತನದ ಕಂಪೆನಿಗೆ ಟೆಂಡರ್ ಕೂಡ ಕರೆಯದೆ ನೀಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿರುವವರು ಆಪಾದಿಸಿದ್ದಾರೆ.











Click it and Unblock the Notifications