ರಜಾ ಮಂಜೂರಿಗೂ ಲಂಚ ಪಡೆದು ಲೋಕಾಯುಕ್ತ ಪಾಲಾದ

ಬಸ್ ಚಾಲಕನಿಗೆ ರಜೆ ಮಂಜೂರು ಮಾಡಲು 500 ರೂಪಾಯಿ ಲಂಚ ಪಡೆಯುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಸ್ ಚಾಲಕ ಬಸವರಾಜ ಕರಿಬಾವಿ ಅವರಿಗೆ ರಜೆ ನೀಡಲು ಘಟಕ ವ್ಯವಸ್ಥಾಪಕ ಪಿಎಸ್ ವಸ್ತ್ರದ 500 ರೂಪಾಯಿ ಲಂಚ ಕೇಳಿದ್ದ. ಈ ಬಗ್ಗೆ ಲೋಕಾಯುಕ್ತರಿಗೆ ಚಾಲಕ ಕರಿಬಾವಿ ದೂರು ನೀಡಿದ್ದರು. ಮಂಗಳವಾರ ಲಂಚ ಪಡೆಯುತ್ತಿದ್ದ ವೇಳೆ ವಿಜಾಪುರ ಲೋಕಾಯುಕ್ತ ಡಿವೈಎಸ್‌ಪಿ ವಿಬಿ ಮಡಿವಾಳರ ಹಾಗೂ ತಂಡ ದಾಳಿ ಮಾಡಿ ಆರೋಪಿಯನ್ನು ಬಂಧಿಸಿತು.
ಪಿಎಸ್ಐ ಆರ್.ಎಂ. ಕುರುಬಗಟ್ಟಿ ಮತ್ತು ಚಂದ್ರಕಾಂತ ನೇತೃತ್ವದ ತಂಡ ವಸ್ತ್ರದ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿತು. 'ಘಟಕ ವ್ಯವಸ್ಥಾಪಕರು ಪ್ರತಿಯೊಬ್ಬ ಚಾಲಕ ಹಾಗೂ ನಿರ್ವಾಹಕರಿಂದ ಪ್ರತಿ ತಿಂಗಳು ಕನಿಷ್ಠ 200 ರೂಪಾಯಿ ಹಫ್ತಾ ವಸೂಲಿ ಮಾಡುತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ಸಿಬ್ಬಂದಿ ವರ್ಗದವರಿಂದ ದೂರು ಸ್ವೀಕರಿಸಿ, ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸಲಾಗುವುದು' ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications