ಡಿವಿಯಿಂದ ಕಾವೇರಿಗೆ ಬಾಗಿನ, ಚಾಮುಂಡಿಗೆ ನಮನ

ಚಾಮುಂಡಿಬೆಟ್ಟದಿಂದ ನೇರವಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ತೆರಳಿದ ಸಿಎಂ ಸದಾನಂದಗೌಡರವರು ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪತ್ನಿ ಡಾಟಿ ಅವರೊಂದಿಗೆ ಬಾಗಿನ ಅರ್ಪಿಸಿದರು. 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 124.10 ಅಡಿ ನೀರು ತುಂಬಿದೆ.
ಮಂಗಳವಾರವೇ ನಗರಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಸಂಜೆ ಕಬ್ಬು ಬೆಳೆಗಾರರ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಪತ್ನಿ ಡಾಟಿ ಹಾಗೂ ಪುತ್ರನೊಂದಿಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ತೆರಳಿದ ಅವರು ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದರು.
ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಸಕುಟುಂಬ ಸಮೇತರಾಗಿ ತೆರಳಿ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ರಾಜ್ಯದ ಜನತೆಗೆ ಒಳ್ಳೆಯದಾಗಲಿ ಹಾಗೂ ಅಭಿವೃದ್ಧಿಶೀಲ ರಾಜ್ಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭ ಪತ್ರಕರ್ತರು ಅವರನ್ನು ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆಳೆಯಲು ಪ್ರಯತ್ನಿಸಿದರಾದರೂ ಯಾವುದೇ ರೀತಿಯ ಹೇಳಿಕೆ ನೀಡದ ಸಿಎಂ ಉತ್ತಮ ಆಡಳಿತ ನಡೆಸಲು ಶಕ್ತಿ ಬಂದಿದೆ ಎಂದಷ್ಟೇ ಹೇಳಿ ಹೊರಟು ಹೋದರು.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೊಂದಿಗೆ ಸಚಿವರಾದ ಆರ್ ಅಶೋಕ್, ರಾಮ್‌ದಾಸ್, ಬಸವರಾಜ್ ಬೊಮ್ಮಾಯಿ, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications