'ಭ್ರಷ್ಟಾಚಾರದ ದೂರು ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ'

ಸರ್ಕಾರದ ವರ್ಚಸ್ಸು ವೃದ್ಧಿಗೆ ಕ್ರಮ ತೆಗೆದುಕೊಂಡಿದ್ದು, ಆಡಳಿತದ ಮೇಲೆ ಹಿಡಿತ ಸಾಧಿಸಲು ಗೌಡರು ಯತ್ನಿಸಿದ್ದಾರೆ. ಏಪ್ರಿಲ್‌ವರೆಗೆ ಯಾವುದೇ ವರ್ಗಾವಣೆ ಮಾಡಕೂಡದು. ಈ ಕುರಿತ ಕಡತವನ್ನು ತಮಗೆ ಕಳುಹಿಸಬಾರದೆಂದೂ ಸಚಿವರಿಗೆ ಕಟ್ಟಪ್ಪಣೆ ಮಾಡಿದರು ಎನ್ನಲಾಗಿದೆ.
ತಮ್ಮ ಅಧಿಕೃತ ನಿವಾಸ ಅನುಗ್ರಹದಲ್ಲಿ ಕೆಲ ಸಚಿವರನ್ನು ಪ್ರತ್ಯೇಕವಾಗಿ ಕರೆಸಿ ಈ ಕುರಿತು ತಿಳಿಸಿದ್ದು, ಯಾರೊಬ್ಬರೂ ಈ ಕುರಿತಾದ ಕಡತಗಳನ್ನು ತರುವಂತಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸದಾನಂದರು ಕರೆದಿದ್ದ ಸಚಿವರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಪಕ್ಷದ ಇತರ ಇಬ್ಬರು ಪ್ರಮುಖರು ಹಾಜರಿದ್ದರು. ಬೆಳಗ್ಗೆ ಕೆಲ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿದ ಮುಖ್ಯಮಂತ್ರಿ ಮಧ್ಯಾಹ್ನದ ನಂತರ ಸಚಿವರ ಜತೆ ಪ್ರತ್ಯೇಕ ಸಭೆ ನಡೆಸಿದರು. ಸಚಿವರನ್ನು ಒಬ್ಬೊಬ್ಬರಾಗಿ ಕರೆದು ಇಲಾಖೆಯ ಪ್ರಗತಿ ಜತೆಗೆ ಮುಂದೇನು ಮಾಡಬೇಕೆನ್ನುವ ಕುರಿತು ಸಲಹೆ ನೀಡಿದರು ಎನ್ನಲಾಗಿದೆ.
ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಯಾವ ಕಡತವೂ ಮುಖ್ಯಮಂತ್ರಿಗೆ ಬರಬಾರದು. ಇಂತಹ ಕಡತಗಳನ್ನು ಶಾಸಕರು ಸೇರಿದಂತೆ ಯಾವೊಬ್ಬ ಸಚಿವರು ತಮ್ಮ ಬಳಿ ತರುವಂತಿಲ್ಲ ಎಂದೂ ಅವರು ಸೂಚನೆ ನೀಡಿದ್ದಾರೆ. ಗಣಿಗಾರಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ಗೌಡರು ನಿರ್ಧರಿಸಿದ್ದಾರೆ.
'ಇಲಾಖೆಗಳ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಅನುಷ್ಠಾನಗೊಳಿಸಿ. ಯೋಜನೆಗಳ ಅನುಷ್ಠಾನದಲ್ಲಿ ತಪ್ಪು ಮಾಡಿ ನನಗೆ ಮತ್ತು ಸರ್ಕಾರಕ್ಕೆ ಮುಜುಗರ ಆಗುವಂಥ ಪರಿಸ್ಥಿತಿ ತರಬೇಡಿ' ಎಂದು ಉನ್ನತ ಅಧಿಕಾರಿಗಳ ಸಭೆಯಲ್ಲೂ ಮುಖ್ಯಮಂತ್ರಿ ಖಡಕ್ಕಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications