ಶಿವಮೊಗ್ಗದಲ್ಲಿ 'ಮುಖ್ಯಮಂತ್ರಿ' ಯಡಿಯೂರಪ್ಪ ಡೇ ಔಟ್!

ಬೆಂಗಳೂರಿನಿಂದ ಹೆಲಿಕಾಪ್ಟರಿನಲ್ಲಿ ಹಾರಿ ಬಂದ ಯಡಿಯೂರಪ್ಪಗೆ ಇವರೆಲ್ಲರಿಂದ ಮುಖ್ಯಮಂತ್ರಿಗೆ ಸಿಗುವಷ್ಟೇ ಅಭೂತಪೂರ್ವ ಗೌರವ-ಸ್ವಾಗತ ಸಿಕ್ಕಿತು. ಸಚಿವ ಎಂಪಿ ರೇಣುಕಾಚಾರ್ಯ, ಶಾಸಕರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಂದಿಳಿದ ಯಡಿಯೂರಪ್ಪ ಅವರನ್ನು ಸ್ವಾಗತಿಸಿದ್ದು ಜಿಲ್ಲಾಮಟ್ಟದ ಅಧಿಕಾರಿಗಳು.
ಡಿಎಆರ್ ಪೊಲೀಸ್ ಬ್ಯಾಂಡ್‌ನಿಂದ ಗೌರವ ಸೂಚನೆ ಪಡೆದುಕೊಳ್ಳುವ ಶಿಷ್ಟಾಚಾರವನ್ನು ಬಿಟ್ಟು ಮುಖ್ಯಮಂತ್ರಿಗೆ ಸಿಗಬೇಕಾದ ಎಲ್ಲಾ ಗೌರವಗಳನ್ನೂ ಯಡಿಯೂರಪ್ಪ ಅವರಿಗೆ ಸಲ್ಲಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರ ಹಾಕಿ, ಹರ್ಷ ವ್ಯಕ್ತಪಡಿಸಿದರು. ಕಾರ್ಯಕರ್ತರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಮುಖ್ಯಮಂತ್ರಿ ಅವರ ಜಿಲ್ಲಾ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯಂತೂ ಎಂದಿನ ಗತ್ತಿನಲ್ಲಿ ಯಡಿಯೂರಪ್ಪ ಅವರ ಅಕ್ಕಪಕ್ಕ ನಿಂತು ಎಲ್ಲರನ್ನೂ ಚದುರಿಸುವ ಕೆಲಸ ಮಾಡುತ್ತಿದ್ದರು.
ಯಡಿಯೂರಪ್ಪ ಅವರ ಕಾರನ್ನು ಹಿಂಬಾಲಿಸಿ ಹೊರಟ್ಟಿದ್ದು ಬೆಂಗಾವಲು ಪಡೆಯ ಸಾಲು-ಸಾಲು ವಾಹನಗಳು. 'ಶಿವಮೊಗ್ಗ ಜಿಲ್ಲೆ ನಕ್ಸಲ್‌ಪೀಡಿತ ಪ್ರದೇಶವಾದ್ದರಿಂದ ಹಾಗೂ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾದರೂ ಮುಖ್ಯಮಂತ್ರಿ ರೀತಿಯೇ z ಸೆಕ್ಯುರಿಟಿ ಕೊಡಬೇಕು' ಎನ್ನುವ ಸಮರ್ಥನೆ ಅಲ್ಲಿದ್ದ ಡಿವೈಎಸ್ಪಿ ಶೇಖರಪ್ಪ ಅವರದ್ದು.












Click it and Unblock the Notifications