ವಿಪ್ ಸ್ಥಾನಕ್ಕೆ ಗುಡ್ ಬೈ ಹೇಳಿದ ಜೀವರಾಜ್ ಗೆ ಸಚಿವ ಸ್ಥಾನ?

ಎಂಎಲ್ ಎ ಜೀವರಾಜ್ ಅವರು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಅವರ ಕಚೇರಿಗೆ ತಲುಪಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ರಾಜೀನಾಮೆಯನ್ನು ನಂತರ ಪರಿಶೀಲಿಸಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿದೆ.
ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ವಿಷಯ ಖಾತ್ರಿಯಾದ ಮೇಲೆ ಬೇಸರಗೊಂಡು ವಿಪ್ ಸ್ಥಾನದಿಂದ ಹೊರ ನಡೆದಿದ್ದರು. ಆದರೆ, ಈಗ ಸಚಿವ ಸ್ಥಾನ ಸಿಗುವ ಭರವಸೆ ಸಿಕ್ಕ ಮೇಲೆಯೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಜಿಲ್ಲೆ ಮತ್ತೊಬ್ಬ ಸಚಿವ ಸ್ಥಾನ ಅಕಾಂಕ್ಷಿ ಸಿ.ಟಿ. ರವಿಗೆ ಮತ್ತೊಮ್ಮೆ ಮುಖಭಂಗವಾಗುವುದು ನಿಶ್ಚಿತವಾಗಿದೆ. ಜೀವರಾಜ್ ಗೆ ಸಚಿವ ಸ್ಥಾನ ಲಭಿಸಿದರೆ ಶೆಟ್ಟರ್ ಬಣದಲ್ಲಿ ಕಾಣಿಸಿಕೊಂದ ಸಿ.ಟಿ ರವಿ ಮತ್ತೊಮ್ಮೆ ಬಿಜೆಪಿ ವಕ್ತಾರನಾಗೇ ಉಳಿಯಬೇಕಾಗುತ್ತದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಮುಂದಿನ ಸಂಪುಟ ವಿಸ್ತರಣೆ ರೆಡ್ಡಿ ಸೋದರರ ಅಣತಿಯಂತೆ ನಡೆಯುವ ಸಾಧ್ಯತೆಯಿದ್ದು, ಸೋಮಣ್ಣ ಇಳಿಯದಿದ್ದರೆ, ಕರುಣಾಕರ ರೆಡ್ಡಿಗಾದರೂ ಸ್ಥಾನ ಕಲ್ಪಿಸಲು ಯತ್ನ ನಡೆದಿದೆ. ರವಿ ಕೂಡಾ ರೆಡ್ಡಿ ಬಣದ ಸಹಾಯದಿಂದ ಕ್ಯಾಬಿನೆಟ್ ಸೇರುವ ತವಕದಲ್ಲಿದ್ದಾರೆ.












Click it and Unblock the Notifications