ಆಪತ್ತಿಗೆ ಆದ ವರ್ತೂರ್ ಗೆ ಸಚಿವ ಸ್ಥಾನ : ಈಶ್ವರಪ್ಪ ಭರವಸೆ

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ರೆಡ್ಡಿ ಸಹೋದರರು ಹಾಗೂ ಬಾಲಚಂದ್ರ ಜಾರಕಿಹೊಳಿ, ಆನಂದ ಅಸ್ನೋಟಿಕರ್ ಮೊದಲ ಕಂತಿನಲ್ಲಿ ಸ್ಥಾನ ಸಿಕ್ಕಿಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೂ ಸಚಿವ ಸ್ಥಾನ ಪಡೆದವರಲ್ಲೂ ಯಡಿಯೂರಪ್ಪ ಅವರ ಜಾತಿ ಪ್ರಾಬಲ್ಯ ಮುಂದುವರೆದಿದೆ. ಇಪ್ಪತ್ತೊಂದು ಸಚಿವರ ಪೈಕಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ 10, ಬ್ರಾಹ್ಮಣ 4, ಒಕ್ಕಲಿಗ 3, ಪರಿಶಿಷ್ಟ ಜಾತಿ 3 ಹಾಗೂ ಓಬಿಸಿ ವರ್ಗಕ್ಕೆ ಸೇರಿದ ಒಬ್ಬರು ಸಚಿವರಾಗಿದ್ದಾರೆ,
ಈ ಮಧ್ಯೆ ಎರಡನೆ ಹಂತದ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಬೆಂಬಲಿತ ಶಾಸಕ ವರ್ತೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆಯಂತೆ. ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬಂದಿರುವ ಪ್ರಕಾಶ್, ವರಿಷ್ಠರ ಭರವಸೆ ಸಿಕ್ಕ ಮೇಲೆ ಸೀದಾ ಈಶ್ವರಪ್ಪ ಅವರ ಹತ್ತಿರ ತೆರಳಿದ್ದಾರೆ.
ಕೋಲಾರದ' ಹುಲಿ'ವರ್ತೂರ್ ಅವರ ತಲೆ ಮೇಲೆ ಕೈ ಇಟ್ಟಿರುವ ಈಶ್ವರಪ್ಪ, ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಹಾಗೂ ಅನಂತ್ ಮೂವರ ಹತ್ತಿರವೂ ವರ್ತೂರು ಉತ್ತಮ ಸಂಬಂಧ ಹೊಂದಿದ್ದಾರೆ.
ಅವಿಶ್ವಾಸ ನಿರ್ಣಯ ವೇಳೆಯಲ್ಲಿ ಯಡಿಯೂರಪ್ಪ ಪರ ಮತ ಹಾಕಿ ಸರ್ಕಾರವನ್ನು ಉಳಿಸಿದ್ದರು. ನಿತಿನ್ ಗಡ್ಕರಿ ಅವರು ಕೂಡಾ ವರ್ತೂರು ಅವರ ನಿಷ್ಠೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಆಗ ವರ್ತೂರು ನಿಷ್ಠೆ ರೆಡ್ಡಿಗಳ ಪರ ಇತ್ತು. ಈಗ ಸಚಿವ ಸ್ಥಾನ ನೀಡುವವರ ಪರ ಇದೆ.












Click it and Unblock the Notifications