ಕಟ್ಟಾ ಹಾದಿಯಲ್ಲಿ ಯಡಿಯೂರಪ್ಪ: ಆ27 ರಂದು ಏನಾಗಲಿದೆ?

ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಯಡಿಯೂರಪ್ಪಗೆ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯೂ ಇದೆ. ಆ. 27 ರಂದು ನ್ಯಾಯಾಲಯಕ್ಕೆ ಹಾಜರಾದಾಗ ಅವರನ್ನು ಬಂಧಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಲೂಬಹುದು.
ಈ ಹಿನ್ನೆಲೆಯಲ್ಲಿ ಆ. 27ರೊಳಗೆ ಯಡಿಯೂರಪ್ಪ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಅವರಿಗೆ ಜಾಮೀನು ಸಿಗದಿದ್ದರೆ ಪರಪ್ಪನ ಅಗ್ರಹಾರ ಕಾರಾಗೃಹದತ್ತ ಮುಖ ಮಾಡಬೇಕಾಗುತ್ತದೆ.
ಡಿನೋಟಿಫಿಕೇಷನ್ ಹಾಗೂ ಸಂಬಂಧಿಕರ ಒಡೆತನದಲ್ಲಿರುವ ಸಂಸ್ಥೆಗಳಿಗೆ ಕೆಲವು ಕಂಪನಿಗಳಿಂದ ದೇಣಿಗೆ ಪಡೆದಿರುವ ಪ್ರಕರಣಗಳಿಗೆ ಸಂಬಂದಿಸಿದಂತೆ ಬಿಎಸ್‌ವೈ, ಅವರ ಇಬ್ಬರು ಪುತ್ರರು, ಅಳಿಯ ಸೇರಿದಂತೆ 15 ಮಂದಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ, ಆ.27 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
ಬಿಎಸ್‌ವೈ ಹಾಗೂ 15 ಮಂದಿ ಆ. 27 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವುದು ಅನಿವಾರ್ಯವಾಗಿದೆ. ಅಂದು ನ್ಯಾಯಾಲಯಕ್ಕೆ ಹಾಜರಾಗಿ ಅಲ್ಲೇ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆ. 27 ರಂದು ಇಲ್ಲವೇ ಮತ್ತೂಂದು ದಿನ ಜಾಮೀನು ಅರ್ಜಿಯ ವಿಚಾರಣೆ ನಡೆದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಣೆಬರಹ ನಿರ್ಧಾರ ಆಗಲಿದೆ.
ಡಿನೋಟಿಫಿಕೇಷನ್ ಹಾಗೂ ವಿವಿಧ ಕಂಪನಿಗಳಿಂದ ದೇಣಿಗೆ ಪಡೆಯುವಾಗ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರು ಅಕ್ರಮವೆಸಗಿದ್ದಾರೆಂದು ಆರೋಪಿಸಿ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿದ್ದ 2ನೇ ಮೊಕದ್ದಮೆಯ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾ. ಸುಧೀಂದ್ರ ರಾವ್ ಸಮನ್ಸ್ ಜಾರಿ ಮಾಡಿದ್ದಾರೆ.












Click it and Unblock the Notifications