ಪದ್ಮನಾಭಸ್ವಾಮಿ ದೇಗುಲದಲ್ಲಿ ಸೋಮವಾರ ಏನು ನಡೆಯಲಿದೆ?

ಅನಂತ ಪದ್ಮನಾಭಸ್ವಾಮಿ ದೇಗುಲದಲ್ಲಿ ಸೋಮವಾರದಂದು (ಆ. 8) ಒಳಿತು ಕೆಡುಕುಗಳನ್ನು ತಿಳಿಯುವ ಸಲುವಾಗಿ ಅಷ್ಟಮಂಗಲ (ದೇವ ಪ್ರಶ್ನೆ) ಪ್ರಶ್ನೆ ಇಡಲಾಗುವುದು. ಸೋಮವಾರ ಬೆಳಗ್ಗೆ 9.00 ಗಂಟೆಗೆ ಅಷ್ಟಮಂಗಲ ಪ್ರಶ್ನೆ ಆರಂಭವಾಗಲಿದೆ. ಅಷ್ಟಮಂಗಲ ಪ್ರಶ್ನೆಯಿಡುವ ಜ್ಯೋತಿಷಿಗಳನ್ನು ಆಮಂತ್ರಿಸುವ ವಿಧಿ ಶುಕ್ರವಾರ ಬೆಳಗ್ಗೆ 10.25ಕ್ಕೆ ನೆರವೇರಿದೆ. ಮೂರು ದಿನಗಳ ಕಾಲ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.
ತಿರುವಾಂಕೂರು ರಾಜಮನೆತನದ ಅಜಿತ್ ರಾಮವರ್ಮ ಅವರು ಪ್ರಧಾನ ದೈವಜ್ಞ ನಾರಾಯಣ ರಂಗಾಭಟ್ ಅವರನ್ನು ಆಮಂತ್ರಿಸಿದರು ಎಂದು ಮೂಲಗಳು ತಿಳಿಸಿವೆ. ನಾರಾಯಣ ರಂಗಾಭಟ್ ಜತೆಗೆ ಪ್ರಧಾನ ದೈವಜ್ಞರಾಗಿ ಪದ್ಮನಾಭ ಶರ್ಮ ಇರಿಂಜಾಲಕುಡ, ಹರಿದಾಸ್ ನಂಬೂದಿರಿಪ್ಪಾಡ್, ಜಯರಾಜ್ ಪಣಿಕ್ಕರ್, ದೇವಿದಾಸ್ ಗುರುಕ್ಕಳ್ ಮತ್ತು ಪ್ರವೀಣ್ ತಂತ್ರಿ ಹಾಗೂ ಸಹ ದೈವಜ್ಞರು ಅಷ್ಟಮಂಗಳ ಪ್ರಶ್ನೆಯಲ್ಲಿ ಭಾಗವಹಿಸುತ್ತಾರೆ.
ದೇಗುಲದ ನೆಲಮಾಳಿಗೆಯಲ್ಲಿರುವ 'ಬಿ' ರಹಸ್ಯ ಉಗ್ರಾಣವನ್ನು ಇನ್ನೂ ತೆರೆಯಲಾಗಿಲ್ಲ. ಈ ಕೊಠಡಿಯನ್ನು ತೆರೆಯುವ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮೊದಲೇ ಅಷ್ಟಮಂಗಲ ಪ್ರಶ್ನೆಯಿಟ್ಟು ಒಳಿತು ಕೆಡುಕುಗಳನ್ನು ತಿಳಿದುಕೊಳ್ಳುವುದು ರಾಜಮನೆತನದವರ ಉದ್ದೇಶವಾಗಿದೆ. 'ಬಿ' ಉಗ್ರಾಣದ ಬಾಗಿಲಿನಲ್ಲಿ ನಾಗಮುದ್ರಿಕೆಯಿದ್ದು, ಅದನ್ನು ತೆರೆದರೆ ಕೆಡುಕುಗಳಾಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications