ಕರಾವಳಿಯಲ್ಲಿ ಚಿಗುರೊಡೆದ ಮಂತ್ರಿ ಹುದ್ದೆಯ ಕನಸು

ಈ ಹಿಂದೆ ಯಡಿಯೂರಪ್ಪ ಅವರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಸಿಗದ ಕಾರಣಕ್ಕೆ ಮುನಿಸಿಕೊಂಡಿದ್ದ, ನಾಲ್ಕನೆಯ ಸಲ ಶಾಸಕರಾಗಿ ಆರಿಸಿ ಬಂದಿರುವ ಎನ್.ಯೋಗೀಶ್ ಭಟ್ ಕೊನೆಗೆ ಉಪಸಭಾಪತಿಯಾಗಿ ನೋವು ಮರೆತಿದ್ದರು. ಇದೀಗ ಮುಖ್ಯಮಂತ್ರಿ ಬದಲಾಗಿರುವುದರಿಂದ ಹೊಸದಾಗಿ ಸಚಿವರಾಗಲು ಜಿಲ್ಲೆಯ ಅನೇಕ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.
ಇಂಥ ಸಂದರ್ಭದಲ್ಲಿ ಮಂಗಳೂರು ಶಾಸಕ ಯೋಗೀಶ್ ಭಟ್ ಮತ್ತೆ ಸಚಿವ ಸ್ಥಾನಕ್ಕೆ ಹಕ್ಕೊತ್ತಾಯ ಮಂಡಿಸುತ್ತಾರೆಯೆ? ಎನ್ನುವುದು ಅವರ ಆಪ್ತ ವಲಯದ ಪ್ರಶ್ನೆ. ಯಡಿಯೂರಪ್ಪ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಜೆ.ಕೃಷ್ಣ ಪಾಲೇಮಾರ್ ಬಿಜೆಪಿ ಪಾಳೆಯದಲ್ಲಿ ಪ್ರಭಾವಿಯಾಗಿದ್ದು ಸಂಘ ಪರಿವಾರದಲ್ಲೂ ಎಲ್ಲರಿಗೂ ಬೇಕಾದವರಾಗಿರುವುದರಿಂದ ಅವರ ಸಚಿವ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ಕುತ್ತು ಬರುವುದಿಲ್ಲ ಎನ್ನುವುದು ಅವರ ಆಪ್ತರ ನಂಬಿಕೆ.
ಸುಳ್ಯದ ಶಾಸಕ ಅಂಗಾರ ಅವರು ಬಹಳ ಕಾಲದಿಂದಲೂ ಸಚಿವ ಸ್ಥಾನದ ಆಕಾಂಕ್ಷಿ. ಸುಳ್ಯದ ಮಂಡೆಕೋಲಿನವರಾದ ಡಿವಿ ತಮ್ಮ ತಾಲೂಕಿನವರೇ ಆದ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆಯಿದೆ. ಆದರೆ ಅನಂತ್ ಬಣ ಶೇ.50ರಷ್ಟು ಆಯಕಟ್ಟಿನ ಹುದ್ದೆಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವಾಗ ಅಂಗಾರ ಅವರ ನಿರೀಕ್ಷೆ ನಿಜವಾಗುವುದು ಕಷ್ಟವೇ ಸರಿ.












Click it and Unblock the Notifications