ಪಿತೃವಾಕ್ಯ ಪರಿಪಾಲಕ ಕುಮಾರಸ್ವಾಮಿ ಮೌನಕ್ಕೆ ಶರಣು

ಕಳೆದ ಬಾರಿ ಅಪ್ಪನ ಮಾತು ಕೇಳಿ ಯಡ್ಡಿಗೆ ಅಧಿಕಾರ ಕೊಡದೆ ಕುಮಾರ ಹಾಳಾದ ಎಂದು ಇಡೀ ಕರ್ನಾಟಕದ ಜನತೆ ಮಾತನಾಡಿಕೊಂಡಿದ್ದರು. ಆದರೆ ಈ ಬಾರಿ, ಬಿಜೆಪಿಯ ವಿದ್ಯಮಾನಗಳ ಕುರಿತು ಯಾವುದೇ ಹೇಳಿಕೆಯನ್ನು ನೀಡದಿರುವಂತೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ತಮ್ಮ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಕಟ್ಟಾಜ್ಞೆ ಮಾಡಿದ್ದಾರೆ.
ಚುನಾವಣೆಗೆ ಸಿದ್ಧರಾಗಿ ಸಾಕು: ಯಾವುದಾದರೂ ಹೇಳಿಕೆ ನೀಡಿದರೆ ಬಿಜೆಪಿ ಅದನ್ನೇ ದೊಡ್ಡ ಸಂಗತಿಯಾಗಿ ಮಾಡಿಕೊಂಡು ಜೆಡಿಎಸ್ ವಿರುದ್ಧ ತಿರುಗಿ ಬೀಳಬಹುದು. ಅದಕ್ಕೆ ಅವಕಾಶ ನೀಡಬಾರದು. ಹೇಗಿದ್ದರೂ ಹೊಸ ಸರ್ಕಾರ ಹೆಚ್ಚು ದಿನವೇನು ಬಾಳುವುದಿಲ್ಲ. ಆದ್ದರಿಂದಲೇ ಚುನಾವಣೆಯತ್ತ ಸಿದ್ಧತೆ ನಡೆಸುವುದೇ ಸರಿ ಎಂಬ ಅಭಿಪ್ರಾಯಕ್ಕೆ ಗೌಡರು ಬಂದಿದ್ದಾರೆ. ಅದ್ದರಿಂದಲೇ ಪಕ್ಷದ ಯಾವುದೇ ಮುಖಂಡರು ಭೇಟಿಯಾದರೂ ಸಹ ಚುನಾವಣೆಗೆ ಸಿದ್ಧರಾಗುವಂತೆ ಸೂಚಿಸುತ್ತಿದ್ದಾರೆ.
ಹಂಗಾಮಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಲ್ಲಾ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ಬೆಳವಣಿಗೆಗಳನ್ನು ಕಾದು ನೋಡಬೇಕೆ ಹೊರತು ಹೇಳಿಕೆ ನೀಡಲು ಹೋಗಬಾರದೆಂದು ಸೂಚ್ಯವಾಗಿ ತಿಳಿಸಿದ್ದಾರೆ.
ನ್ಯೂಸ್ ಚಾನೆಲ್‌ಗಳ ಮೈಕ್‌ಗಳನ್ನು ನೋಡಿದ ಕೂಡಲೇ ಹೇಳಿಕೆ ನೀಡುವ ಚಾಳಿಯನ್ನು ಬಿಜೆಪಿ ಬೆಳವಣಿಗೆಗಳು ಮುಗಿಯುವ ತನಕ ಕೈಬಿಡಬೇಕೆಂದೇ ಗೌಡರು ಕುಮಾರಸ್ವಾಮಿಯನ್ನು ಕಟ್ಟಿ ಹಾಕಿದ್ದಾರೆ. ಆದ್ದರಿಂದಲೇ ಮೂರು ದಿನಗಳಿಂದ ಕುಮಾರಸ್ವಾಮಿ ಮೌನಕ್ಕೆ ಶರಣಾಗಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.












Click it and Unblock the Notifications