ಬಿ.ಎಸ್. ಯಡಿಯೂರಪ್ಪ ಮನೆ-ಮನ ಬಿಕೋ ಎನುತಿದೆ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಸ್ಥಳ ಚಿತ್ರಣವಿದು. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಮರುದಿನವೇ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಅವರ ನಿವಾಸದ ಆವರಣ ಜನರಿಲ್ಲದೇ ಸೊರಗಿದೆ!
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ರೇಸ್‌ಕೋರ್ಸ್ ರಸ್ತೆಯ ನಿವಾಸವೇ ಅವರ ಅಧಿಕೃತ ನಿವಾಸವಾಗಿತ್ತು. ನಿತ್ಯವೂ ನೂರಾರು ಜನರು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಕಾರ್ಯಕರ್ತರು, ಶಾಸಕರು, ಅಧಿಕಾರಿಗಳ ದಂಡೇ ಅಲ್ಲಿರುತ್ತಿತ್ತು. ಹಾರ, ತುರಾಯಿಗಳ ಭರಾಟೆಯೂ ಇರುತ್ತಿತ್ತು.
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಭಾನುವಾರವೂ ಯಡಿಯೂರಪ್ಪ ನಿವಾಸದ ಬಳಿ ನೂರಾರು ಜನರು ಸೇರಿದ್ದರು. ಆದರೆ, ಸೋಮವಾರ ಚಿತ್ರಣ ಸಂಪೂರ್ಣ ಬದಲಾಗಿತ್ತು. ಯಡಿಯೂರಪ್ಪ ಬಣದ ಶಾಸಕರು ಕಾರಿನಲ್ಲಿ ಬಂದು ಹೋಗುತ್ತಿದ್ದರು. ಸಾರ್ವಜನಿಕರ ಸಂಖ್ಯೆಯಂತೂ ಬೆರಳೆಣಿಕೆಯಷ್ಟಿತ್ತು.
ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ನಿವಾಸದ ಪ್ರವೇಶ ದ್ವಾರವನ್ನು ಮೂರು ದಿನಗಳಿಂದ ಮುಚ್ಚಲಾಗಿತ್ತು. ಭಾನುವಾರ ಸಂಜೆಯವರೆಗೂ ಶಾಸಕರು, ಸಂಸದರು ಮತ್ತು ಯಡಿಯೂರಪ್ಪ ಅವರ ನಿಕಟವರ್ತಿಗಳಿಗೆ ಮಾತ್ರವೇ ಒಳಕ್ಕೆ ಬಿಡಲಾಗುತ್ತಿತ್ತು.
ಸೋಮವಾರ ಬೆಳಿಗ್ಗೆಯೇ ಪ್ರವೇಶ ದ್ವಾರವನ್ನು ತೆರೆಯಲಾಯಿತು. ಪೊಲೀಸರು ಒಳಕ್ಕೆ ಹೋಗುವವರ ತಪಾಸಣೆ ನಡೆಸಿದ ಬಳಿಕ, ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಬೆಳಿಗ್ಗೆಯಿಂದಲೂ ಅವರ ಮನೆಯಲ್ಲಿ ಇದ್ದರು.
ಸಂಸದರಾದ ಡಿ.ವಿ. ಸದಾನಂದಗೌಡ, ಆಯನೂರು ಮಂಜುನಾಥ್, ಉಸ್ತುವಾರಿ ಸಚಿವ ಸಂಪುಟದ ಸದಸ್ಯರಾದ ಉಮೇಶ್ ಕತ್ತಿ, ಎಂ.ಪಿ. ರೇಣುಕಾಚಾರ್ಯ, ಸಿ.ಎಂ. ಉದಾಸಿ, ವಿ. ಸೋಮಣ್ಣ, ರೇವುನಾಯಕ ಬೆಳಮಗಿ ಮತ್ತಿತರರು ಆಗಾಗ ಕಾರಿನಲ್ಲಿ ಬಂದುಹೋದರು. ಮಧ್ಯಾಹ್ನನಂತರವಂತೂ ಚಟುವಟಿಕೆಗಳೆಲ್ಲ ಸ್ತಬ್ಧಗೊಳ್ಳತೊಡಗಿತು.












Click it and Unblock the Notifications