ಮಂಗಳವಾರ ರಾಜ್ಯದ 'ಸಂತೋಷ' ನಿರ್ಗಮನ

ಭ್ರಷ್ಟಾಚಾರ ವಿರುದ್ಧದ ಹೀರೊ: ಲೋಕಾಯುಕ್ತ ಸಂತೋಷ್ ಹೆಗ್ಡೆ ಈಗ ಭ್ರಷ್ಟಾಚಾರ ನಿಯಂತ್ರಣದ ಹೆಸರಿನಲ್ಲಿ ಇಡೀ ದೇಶಕ್ಕೆ ಹೀರೊ ಎನಿಸಿಕೊಂಡಿದ್ದಾರೆ. ಅನೇಕರು ಫೇಸ್‌ಬುಕ್, ಟ್ವಿಟರ್ ಮೂಲಕ ಹೆಗ್ಡೆ ಅವರಿಗೆ ಹೊಗಳಿಕೆಗಳ ಮಹಾಪೂರ ಸಲ್ಲಿಸುತ್ತಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಇಲ್ಲಿಯತನಕ ಯಾವುದೇ ಮುಖ್ಯಮಂತ್ರಿ ಲೋಕಾಯುಕ್ತ ತನಿಖಾ ವರದಿ ಮೇಲೆ ಅಧಿಕಾರ ಕಳೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಆಡಳಿತ ಸುಧಾರಣೆ ಹಾಗೂ ಭ್ರಷ್ಟಾಚಾರ ನಿಯಂತ್ರಿಸುವ ಹಿನ್ನೆಲೆಯಲ್ಲಿ 1984ರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ 'ಲೋಕಾಯುಕ್ತ ಕಾಯ್ದೆ' ರೂಪಿಸಿ ಪ್ರತ್ಯೇಕ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಅವರ ಅಧಿಕಾರವಧಿಯಲ್ಲಿ ಲೋಕಾಯುಕ್ತಕ್ಕೆ ಮುಖ್ಯಮಂತ್ರಿ ವಿರುದ್ಧವೂ ಕ್ರಮ ಜರುಗಿಸುವ ಪರಮಾಧಿಕಾರ ನೀಡಲಾಗಿತ್ತು.
ಆದರೆ ಅದು ಬಹಳಷ್ಟು ವಿವಾದಕ್ಕೆ ಎಡೆಯಾಗಿದ್ದರಿಂದ ಮತ್ತೆ 1985ರಲ್ಲಿ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ಲೋಕಾಯುಕ್ತರಿಗೆ ನೀಡಿದ್ದ ಪರಮಾಧಿಕಾರಕ್ಕೆ ಕತ್ತರಿ ಹಾಕಲಾಗಿತ್ತು. ಅಂದಿನಿಂದಲೇ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಜಾರಿಯಲ್ಲಿತ್ತು. ಆದರೆ ಅಧಿಕಾರಕ್ಕೆ ಬಂದಿದ್ದ ಯಾವ ಲೋಕಾಯುಕ್ತರೂ ತಮ್ಮ ಅಧಿಕಾರವ್ಯಾಪ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಚಲಾಯಿಸಿರಲಿಲ್ಲ. ಹೀಗಾಗಿ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿ ಇದ್ದುದ್ದೇ ಜನತೆಗೆ ಗೊತ್ತಿರಲಿಲ್ಲ.
ಆದರೆ ಈಗ ಲೋಕಾಯುಕ್ತ ಸಂಸ್ಥೆ ತನಗಿರುವ ಅಧಿಕಾರ ವ್ಯಾಪ್ತಿಯನ್ನು ಇಡೀ ದೇಶಕ್ಕೆ ತೋರಿಸಿ ಕೊಟ್ಟಿದೆ. ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಸಾಮರ್ಥ್ಯ ಮತ್ತು ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಿ ತೋರಿಸಿದ್ದು ನಿವೃತ್ತ ನ್ಯಾ. ಎನ್. ವೆಂಕಟಾಚಲ. 2000 ದಲ್ಲಿ ಅಧಿಕಾರಕ್ಕೆ ಬಂದ ನ್ಯಾ. ವೆಂಕಟಾಚಲ ಮೊದಲ ಬಾರಿಗೆ ಭ್ರಷ್ಟ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲು ಆರಂಭಿಸಿದ್ದರು. ಅವರು ತಮ್ಮ ಐದು ವರ್ಷಗಳ ಅಧಿಕಾರವಧಿಯಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದರು. ನಂತರ 2006ರಲ್ಲಿ ನ್ಯಾ. ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡರು.
ಆ.2ರಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ತಮ್ಮ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿ ನಿರ್ಗಮಿಸುತ್ತಾರೆ. ಅಷ್ಟೇಅಲ್ಲ ಲೋಕಾಯುಕ್ತ ಸಂಸ್ಥೆಯಲ್ಲಿ ಒಂದು ಇತಿಹಾಸವನ್ನು ನಿರ್ಮಾಣ ಮಾಡಿ ಆ ಸ್ಥಾನದಿಂದ ಹೊರ ನಡೆಯುತ್ತಿದ್ದಾರೆ. ಸಂತೋಷ್ ಹೆಗ್ಡೆ ಕಾನೂನು ಬಗ್ಗೆ ಎಷ್ಟೊಂದು ತಿಳಿದುಕೊಂಡಿದ್ದಾರೆ ಎನ್ನುವುದು ಅವರು ಸಲ್ಲಿಸಿರುವ ಈ ಗಣಿ ವರದಿ ಹೇಳುತ್ತದೆ.
ಆಲ್ ದಿ ಬೆಸ್ಟ್ ನ್ಯಾಯಮೂರ್ತಿ ನಿಟ್ಟೆ ಸಂತೋಷ ಹೆಗ್ಡೆ ಅವರೇ, ನಿಮ್ಮ ವಿಶ್ರಾಂತ ಜೀವನ ಸುಖ, ನೆಮ್ಮದಿ ತರಲಿ, ಬೈ...












Click it and Unblock the Notifications