ಯಡಿಯೂರಪ್ಪರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಂವಿಧಾನದ ಕಲಂ 164(1)ರ ಅನ್ವಯ ಯಡಿಯೂರಪ್ಪ ಅವರ ರಾಜೀನಾಮೆಯನ್ನು ಸ್ವೀಕರಿಸಿ, ಅಂಗೀಕಾರ ಮುದ್ರೆ ಒತ್ತಿದ್ದಾರೆ. ಹೊಸ ನಾಯಕನ ಆಯ್ಕೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.
ಇದಕ್ಕೂ ಮುನ್ನ ಬಿಗಿ ಭದ್ರತೆಯ ನಡುವೆ ರಾಜಭವನದತ್ತ ಕಾಲ್ನಡಿಗೆಯಲ್ಲಿ ಸಾಗಿದ ಯಡಿಯೂರಪ್ಪ ಅವರು ಸಾರ್ವಜನಿಕವಾಗಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಪೊಲೀಸ್ ಸರ್ಪಗಾವಲಿನಲ್ಲಿ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿದ್ದ ಯಡಿಯೂರಪ್ಪ ಅವರಿಗೆ ರೆಡ್ಡಿ ಸೋದರರು, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಉಮೇಶ್ ಕತ್ತಿ ಸೇರಿದಂತೆ ಎಲ್ಲಾ ಬೆಂಬಲಿಗ ಶಾಸಕರು, ಸಚಿವರು ಸಾಥ್ ನೀಡಿದರು.
ಇದಕ್ಕೂ ಮುನ್ನ ಬಿಜೆಪಿ ಹೈಕಮಾಂಡ್ ಕೂಡಾ ರಾಜೀನಾಮೆ ನೀಡಲು ಯಡಿಯೂರಪ್ಪ ಅವರಿಗೆ ಮಧ್ಯಾಹ್ನ 3 ಗಂಟೆ ತನಕ ಗಡುವು ನೀಡಿತ್ತು. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರವಷ್ಟೇ ಹೊಸ ನಾಯಕನನ್ನು ಘೋಷಿಸುವುದಾಗಿ ಹೇಳಿ ಗೊಂದಲ ಸೃಷ್ಟಿಸಿದ್ದರು.
ಆದರೆ, ರೇಸ್ ಕೋರ್ಸ್ ರಸ್ತೆಯಲ್ಲಿ ಶಾಸಕರ ಜೊತೆ ಭೋಜನಕೂಟ ನಡೆಸಿದ್ದ ಯಡಿಯೂರಪ್ಪ ಅವರು ತಾವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದು ಕುಳಿತುಬಿಟ್ಟಿದ್ದರು. ಶಾಸಕರು ಯಡಿಯೂರಪ್ಪ ಅವರಿಗೆ ದಿಗ್ಬಂಧನ ವಿಧಿಸಿ, ಮನೆ ಬಿಟ್ಟು ಹೊರಡದಂತೆ ತಡೆದಿದ್ದರು.
ಸಿಎಂ ಅವರ ಬೇಡಿಕೆಗಳ ಪತ್ರದೊಂದಿಗೆ ಪಕ್ಕದಲ್ಲಿರುವ ಹೋಟೆಲ್ ಅಶೋಕಗೆ ಹೋದ ಬಸವರಾಜ ಬೊಮ್ಮಾಯಿ ಅವರು ಅರುಣ್ ಜೇಟ್ಲಿ ಹಾಗೂ ರಾಜನಾಥ್ ಸಿಂಗ್ ಅವರು ಚರ್ಚೆ ನಡೆಸಿದರು. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಯಡಿಯೂರಪ್ಪ ಅವರು ವಿಳಂಬ ನೀತಿ ಅನುಸರಿಸಿ, ತಮ್ಮ ಕಾರ್ಯಸಾಧಿಸಿಕೊಂಡಿದ್ದಾರೆ.
ಈಶ್ವರಪ್ಪ ಎಲ್ಲಿ?: ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿ ಸುತರಾಂ ಒಪ್ಪಲು ಸಾಧ್ಯವಿಲ್ಲ ಎಂದಿರುವ ಈಶ್ವರಪ್ಪ ಅವರು ಹೈಕಮಾಂಡ್ ನಾಯಕರೊಡನೆ ಚರ್ಚೆ ನಡೆಸುತ್ತಲೇ ಇದ್ದಾರೆ. ಸಂಜೆ ಆರು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಬಿಜೆಪಿಯ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆಯಿದೆ.












Click it and Unblock the Notifications