ಯಡಿಯೂರಪ್ಪ ಚೆಲ್ಲಾಟ ವರಿಷ್ಠರಿಗೆ ಪ್ರಾಣಸಂಕಟ!

ಬೆಂಗಳೂರಿಗೆ ಬೆಳಿಗ್ಗೆ 10 ಗಂಟೆಗೆ ಬಂದಾಗಿನಿಂತ ಸತತವಾಗಿ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿರುವ ಯಡಿಯೂರಪ್ಪ, ಹೈಕಮಾಂಡಿಗೆ ವಿಧಿಸಿರುವ ಮೂರು ಷರತ್ತುಗಳನ್ನು [ಯಾವುದು ಆ ಷರತ್ತುಗಳು?] ಈಡೇರಿಸುವವರೆಗೆ ರಾಜೀನಾಮೆಯನ್ನು ನೀಡಬಾರದೆಂಬ ನಿರ್ಧಾರಕ್ಕೆ ಬಂದಂತಿದೆ. ಯಡಿಯೂರಪ್ಪನವರ ಈ ಹಠಮಾರಿತನ ಬಿಜೆಪಿ ವರಿಷ್ಠರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಈ ಎರಡು ದಿನಗಳ ಸಮಯಾವಕಾಶವನ್ನು ತಮಗೆ ಅನುಕೂಲವಾಗುವಂತೆ ಪರಿವರ್ತಿಸುವ ತಂತ್ರಗಾರಿಕೆಯನ್ನು ಯಡಿಯೂರಪ್ಪ ಅನುಸರಿಸುತ್ತಿರುವುದು ಸ್ಪಷ್ಟ. ಯಡಿಯೂರಪ್ಪನವರ ಈ ಚೆಲ್ಲಾಟದಿಂದಾಗಿ ಬಿಜೆಪಿ ವರಿಷ್ಠರಿಗೆ ಪ್ರಾಣಸಂಕಟ ಆರಂಭವಾಗಿದೆ. ಜು.29ರಂದು ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಬೆಂಗಳೂರಿಗೆ ಬರಲಿದ್ದು ಈ ಗೊಂದಲಗಳಿಗೆ ಅಂತ್ಯ ಹಾಡುವ ನಿರೀಕ್ಷೆಯಿದೆ.
ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದಾರೆಂಬ ಸುದ್ದಿಯೂ ಹಬ್ಬಿತ್ತು. ಆದರೆ, ರಾಜ್ಯಪಾಲರಿಗೆ ಅವರು ಯಾವುದೇ ಪತ್ರವನ್ನು ರವಾನಿಸಿಲ್ಲ. ರಾಜೀನಾಮೆಯ ಬಗ್ಗೆ ತಮ್ಮ ನಿಲುವೇನು, ಎಂದು ಸಲ್ಲಿಸಲಿದ್ದಾರೆ ಎಂಬ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರಷ್ಟೆ. ಪತ್ರದಲ್ಲಿ ತಾವು ಬಯಸಿದವರೆ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟು ಹಿಡಿದಿದ್ದಾರೆ.
ಹೈಕಮಾಂಡ್ ಆದೇಶ ಗಾಳಿಗೆ : ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ರೇಣುಕಾಚಾರ್ಯ, ಸೊಗಡು ಶಿವಣ್ಣ, ವಿ ಸೋಮಣ್ಣ, ಮುರುಗೇಶ್ ನಿರಾಣಿ, ಆಯನೂರು ಮಂಜುನಾಥ್, ಉಮೇಶ್ ಕತ್ತಿ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ ಮುಂತಾದವರು ಮುಂದಿನ ನಡೆಗಳ ಬಗ್ಗೆ ಚರ್ಚೆ ಯಡಿಯೂರಪ್ಪ ನಡೆಸುತ್ತಿದ್ದಾರೆ. ಯಡಿಯೂರಪ್ಪನವರೊಡನೆ ಯಾರೂ ಸಭೆಯಲ್ಲಿ ಭಾಗವಹಿಸಕೂಡದು ಎಂಬ ಆದೇಶವನ್ನು ಗಾಳಿಗೆ ತೂರಲಾಗಿದೆ.
ಬೆಂಗಳೂರಿಗೆ ಆಗಮಿಸಿರುವ ಕರ್ನಾಟಕ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ತಾಜ್ ವೆಸ್ಟೆಂಡ್ ಹೊಟೇಲಿನಲ್ಲಿ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಡಿವಿ ಸದಾನಂದ ಗೌಡ ಮತ್ತು ಆರ್ ಅಶೋಕ್ ವಿಸ್ತೃತವಾಗಿ ಮಾತುಕತೆ ನಡೆಸಿದರು. ಧರ್ಮೇಂದ್ರ ಅವರು ಯಡಿಯೂರಪ್ಪನವರನ್ನು ಇಂದು ಭೇಟಿ ಮಾಡುವ ಸಂಭಾವ್ಯತೆಯಿದೆ.
ತಪ್ಪು ಮಾಡೇ ಇಲ್ಲ : ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಬಂದ ನಂತರ ಪ್ರಥಮ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಜನಾರ್ದನ ರೆಡ್ಡಿ ಅವರು, "ಲೋಕಾಯುಕ್ತರು ನೀಡಿರುವ ವರದಿಯ ಅಧ್ಯಯನ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಸತ್ಯಾಸತ್ಯತೆಯನ್ನು ರಾಜ್ಯದ ಜನತೆಯ ಎದುರಿಗೆ ಬಿಚ್ಚಿಡುತ್ತೇವೆ. ಇಲ್ಲಿಯವರೆಗೆ ಸತ್ಯದ ಹಾದಿಯಲ್ಲೇ ನಡೆದುಬಂದಿದ್ದೇವೆ, ನಾವು ಯಾವುದೇ ತಪ್ಪು ಮಾಡಿಲ್ಲ" ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಿದರೂ ಕ್ರಮ ಜರುಗಿಸಿ : ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪದವಿಯಿಂದ ಕಿತ್ತುಹಾಕಬೇಕೆಂಬ ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರು, ಯಡಿಯೂರಪ್ಪ ರಾಜೀನಾಮೆ ನೀಡಿದರೂ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications