ಸಿಎಂ ಮನೆಯಲ್ಲಿ ಲಡ್ಡು ವಿತರಣೆ, ಲಾಬಿಗಾರ ಲೆಹರ್ ದಿಲ್ಲಿಗೆ

ಸಂಜೆ ವೇಳೆಗೆ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲೇ ಅನಂತ್ ಕುಮಾರ್, ಸದಾನಂದಗೌಡ ಅವರ ಅಭಿಪ್ರಾಯವನ್ನು ಹೈ ಕಮಾಂಡ್ ಸಂಗ್ರಹ ಮಾಡಿದೆ.
ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಸೇರಿದಂತೆ ಹಿರಿಯ ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಪರ ಲಾಬಿ ನಡೆಸಲು ಲೆಹರ್ ಸಿಂಗ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಜೊತೆ ಆಪ್ತ ಚರ್ಚೆ ನಡೆಸಿದ್ದಾರೆ.
ಆದರೆ, ಈ ನಡುವೆ ಟಿವಿ 9 ಕನ್ನಡ ಸುದ್ದಿ ವಾಹಿನಿಯೊಡನೆ ಮಾತನಾಡಿದ ಲೆಹರ್ ಸಿಂಗ್, ನಾನು ಲಾಬಿ ನಡೆಸಲು ಬಂದಿಲ್ಲ. ನನ್ನ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಎಂ ನಿವಾಸದಲ್ಲಿ ಪ್ರಸಾದ ವಿತರಣೆ: ಇಂದು ಮುಖ್ಯಮಂತ್ರಿ ಅವರ ಜನತಾ ದರ್ಶನ ಕಾರ್ಯಕ್ರಮಕ್ಕೆ ದೂರದೂರಿನಿಂದ ಬಂದವರಿಗೆ ಅಚ್ಚರಿ ಕಾದಿತ್ತು. ದೊರೆಯ ಕೈಗೆ ದೂರಿನ ಪತ್ರ ನೀಡಿದ ಕೈಗಳಿಗೆ ಲಡ್ಡು ಪ್ರಸಾದ ಸಿಕ್ಕಿತು.
ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಲ್ಲರಿಗೂ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದವನ್ನು ಹಂಚಿದರು. ದೂರು ಆಲಿಸುವ ಬದಲು ಲಡ್ಡು ಪ್ರಸಾದ ನೀಡಿದ ಸಿಎಂ ಮುಖ ನೋಡುತ್ತಾ ಏನು ಹೇಳಬೇಕು ಎಂದು ತೋಚದೆ ಜನಸಾಮಾನ್ಯರು ಒಂದು ಕ್ಷಣ ತಬ್ಬಿಬ್ಬಾಗಿದ್ದರು. ಕೊನೆಗೆ 'ದೇವರೆ ಕಾಪಾಡಪ್ಪ ಎಂದು ಕೈಲಿದ್ದ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ಜನರು ಸೇವಿಸಿದರು.
ನಂತರ ತಮ್ಮ ನಿವಾಸದ ಆಗು ಹೋಗುಗಳನ್ನು ತಕ್ಷಣವೇ ಪ್ರಸಾರ ಮಾಡುವ ಟಿವಿ ಮಾಧ್ಯಮರನ್ನು ಕೈ ಬೀಸಿ ಕರೆದ ಸಿಎಂ, ಎಲ್ಲರಿಗೂ ಲಡ್ಡು ಪ್ರಸಾದ ನೀಡಿದರು.












Click it and Unblock the Notifications