ಕಾ.ಪು. ಸಿದ್ದಲಿಂಗಸ್ವಾಮಿ ಪೇಪರ್ ಮಾಡ್ತಾರಂತೆ?

ಇದು ನಿಜವಾದರೆ ಒಂದಷ್ಟು ಮಂದಿಗೆ ಉದ್ಯೋಗಾವಕಾಶವಾಗುತ್ತೆ ಎಂಬ ಸಮಾಧಾನವಿದೆ. ಜೊತೆಗೆ ಇವತ್ತಿನ ಮಟ್ಟಿಗೆ ಕಾ.ಪು.ಸಿದ್ದಲಿಂಗಸ್ವಾಮಿಯವರಿಗೇ ಪ್ರಚಾರದ ಅವಶ್ಯಕತೆಯಿರುವುದರಿಂದ ತಮ್ಮದೇ ಆದ ಪತ್ರಿಕೆಯ ಅವಶ್ಯಕತೆ ಕಂಡು ಬಂದಿದ್ದರೆ ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ.
ಕಳೆದೊಂದು ವರ್ಷದಿಂದ ಮೈಸೂರು ವ್ಯಾಪ್ತಿಯಲ್ಲಿ ಕಾ.ಪು.ಸಿದ್ದಲಿಂಗಸ್ವಾಮಿಯವರ ಪ್ರಭಾವ ಕಂಡು ಬರುತ್ತಿದೆ. ಜೊತೆಯಲ್ಲಿಯೇ ಭವಿಷ್ಯದ ದಿನಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರತಿಸ್ಪರ್ಧಿ ಎಂಬಂತೆಯೂ ಬಿಂಬಿಸಲಾಗುತ್ತಿದೆ.
ಹಣವನ್ನು ನೀರಿನಂತೆ ಹರಿಸುತ್ತಿರುವ ಅವರು ಪ್ರಚಾರದ ಬೆನ್ನತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇಲ್ಲಿನ ಸ್ಥಳೀಯ ಪತ್ರಿಕೆಗಳಿಗೆ ಲಕ್ಷಾಂತರ ರೂಪಾಯಿಯ ಜಾಹೀರಾತು ನೀಡುವುದರ ಜೊತೆಗೆ ಕೆಲವು ಪತ್ರಕರ್ತರಿಗೆ 'ಪ್ರಸಾದ'ವನ್ನು ನೀಡುತ್ತಿರುವುದರಿಂದ ಅವರು ಕೂತರೂ, ನಿಂತರೂ ಅದು ಸುದ್ದಿಯಾಗಿ ಚಿತ್ರಸಹಿತ ಪ್ರಕಟವಾಗುತ್ತಿದೆ.
ಬಹುಶಃ ಪತ್ರಿಕೆಗಳಿಗೆ ಜಾಹೀರಾತು ಹಾಗೂ ಸುದ್ದಿ ಪ್ರಕಟಿಸುವುದಕ್ಕೆ 'ಪ್ರಸಾದ' ನೀಡಿ ಸುಸ್ತಾದ ಕಾ.ಪು.ಸಿದ್ದಲಿಂಗಸ್ವಾಮಿಯವರು ತಾವೇ ಒಂದು ಪತ್ರಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದರೆ ಅದನ್ನು ವದಂತಿ ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ.
ಒಂದು ಮೂಲದ ಪ್ರಕಾರ ಹಿಂದೆ ಮೈಸೂರಿನಿಂದ ಪ್ರಕಟವಾಗಿ ಇದೀಗ ಪ್ರಕಟಣೆ ನಿಲ್ಲಿಸಿರುವ "ಮಹಾನಂದಿ" ಪತ್ರಿಕೆಯ ಟೈಟಲ್‌ನ್ನು ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಆ ಟೈಟಲ್ ವ್ಯಕ್ತಿಯೊಬ್ಬರ ಬಳಿಯಿದ್ದು ಆತ ಕೋಟಿ ರೂಪಾಯಿಯ ಡಿಮ್ಯಾಂಡ್ ಮಾಡುತ್ತಿದ್ದಾನೆ ಎಂಬ ಸುದ್ದಿಯೂ ಇದೆ.
ಒಂದು ಕಾಲದಲ್ಲಿ ಜನಪ್ರಿಯ ಪತ್ರಿಕೆಯಾಗಿದ್ದ "ಮಹಾನಂದಿ" ಟೈಟಲ್ ಖರೀದಿಸಿ ಪತ್ರಿಕೆಯನ್ನು ಹೊರತಂದರೆ ಪ್ರಸಾರಸಂಖ್ಯೆ ಹೆಚ್ಚಿಸಲು ಅನುಕೂಲವಾಗುತ್ತೆ ಎನ್ನುವುದು ಅವರ ಅಭಿಪ್ರಾಯವಾಗಿರಬಹುದು. ಎಲ್ಲದಕ್ಕೂ ಕಾದುನೋಡಬೇಕಾಗಿದೆ.












Click it and Unblock the Notifications