ಮೂರನೇ ಐತಿಹಾಸಿಕ ಕದನಕ್ಕೆ ವೇದಿಕೆ ಸಜ್ಜು

ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ ಅವರಿಂದ ಅಕ್ರಮ ಗಣಿಗಾರಿಕೆಯ ವರದಿ ಬರುವುದನ್ನೇ ಭಾರದ್ವಾಜ್ ಕಾಯುತ್ತಿದ್ದಾರೆ. ಬಂದ ಕೂಡಲೆ ಕೂಲಂಕಷವಾಗಿ ವರದಿಯನ್ನು ಪರಿಗಣಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಅವರು ಶುಕ್ರವಾರ ಹೇಳಿದ್ದಾರೆ. ಸದ್ಯಕ್ಕೆ, ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಜರುಗಿಸಲು ಅಧಿಕಾರ ಇರುವುದು ರಾಜ್ಯಪಾಲರಿಗೊಬ್ಬರಿಗೆ.
ಸೋರಿಕೆಯಾಗಿರುವ ಅಕ್ರಮ ಗಣಿಗಾರಿಕೆ ವರದಿಯ ಪ್ರಕಾರ, ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ವಿಸೋಮಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನ ಅನಿಲ್ ಲಾಡ್ ಅವರು ಭಾಗಿಯಾಗಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ನಿಯಮ 12 ಮತ್ತು 13ರ ಪ್ರಕಾರ ಯಡಿಯೂರಪ್ಪ ವಿರುದ್ಧ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಅಧಿಕಾರವಿದೆ.
ಬಲ್ಲ ಮೂಲಗಳ ಪ್ರಕಾರ, ಸೋಮವಾರ ಜು.25ರಂದು ಸಂತೋಷ ಹೆಗಡೆಯವರು ಅಕ್ರಮ ಗಣಿಗಾರಿಕೆಯ ಅಂತಿಮ ವರದಿಯನ್ನು ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಆದರೆ, ಅಷ್ಟರೊಳಗೆ ಯಡಿಯೂರಪ್ಪ ಮಾರಿಷಸ್ ನಿಂದ ವಾಪಸ್ ಬರುವ ಲಕ್ಷಣಗಳಿಲ್ಲ. ಅವರು ಮಾರಿಷಸ್ ನಿಂದ ನೇರವಾಗಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಲಿದ್ದಾರೆ.











Click it and Unblock the Notifications