ಕೇಂದ್ರದಿಂದಲೇ ಟೆಲಿಫೋನ್ ಕದ್ದಾಲಿಕೆ : ಶ್ರೀರಾಮುಲು

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯನ್ನು ಶೇ. 100ರಷ್ಟು ಒಪ್ಪಲೇಬೇಕು ಎಂದು ಗಣಿ ಹಗರಣದ ಆರೋಪಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಗಣಿ ಹಗರಣ ಕುರಿತು ಲೋಕಾಯುಕ್ತರು ಸಲ್ಲಿಸಲಿರುವ ವರದಿಯಲ್ಲಿ ಎಲ್ಲರ ಬಗ್ಗೆಯೂ ಪ್ರಸ್ತಾಪವಾಗಲಿದೆ, ಬಿಡಿ. ರಾಜಕಾರಣಿಗಳಿಗೆ ಅವಮಾನ - ಗೌರವ - ಸನ್ಮಾನಗಳು ಸಹಜ. ನಾನು ಓಡಿ ಹೋಗುವುದಿಲ್ಲ. ಎಲ್ಲವುದನ್ನೂ ಎದುರಿಸುತ್ತೇನೆ ಎಂದರು.
ಕದ್ದಾಲಿಕೆ ತನಿಖೆಯಾಗಲಿ : ಲೋಕಾಯುಕ್ತರ ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಪಾಲ್ಗೊಂಡಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಟೆಲಿಫೋನ್ ಕದ್ದಾಲಿಕೆ ನಡೆಸಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಸಂತೋಷ ಹೆಗಡೆ ಅವರು ದಕ್ಷರು, ಪ್ರಾಮಾಣಿಕರು. ಇವರು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ವರದಿಯನ್ನೇ ಟೆಲಿಫೋನ್‌ನಲ್ಲಿ ಕದ್ದಾಲಿಕೆ ಮಾಡಿರುವುದು ತನಿಖೆ ಆಗಬೇಕು. ಈ ಪ್ರಕರಣದಲ್ಲಿ ಪಾಲ್ಗೊಂಡಿರುವವರ ಹೆಸರುಗಳು ಬಯಲಾಗಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications