ಬ್ಲೇಡ್ ಕಂಪನಿ ಆನ್ ಲೈನ್ ವಂಚನೆಗೆ ಉಡುಪಿ ತತ್ತರ

ಗಲ್ಫ್ ಎಂಬ ಆನ್‌ಲೈನ್ ಮನಿ ಸ್ಕೀಮ್‌ನ ವ್ಯೂಹಕ್ಕೆ ಸಿಲುಕಿ ಅನೇಕ ಗ್ರಾಹಕರು ಲಕ್ಷಾಂತರ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಸ್ಪೀಕ್ ಏಷ್ಯಾ ಎಂಬ ಮಾರ್ಕೆಟಿಂಗ್ ಸರ್ವೆ ಹೆಸರಿನಲ್ಲಿ ಇಂಟರ್‌ನೆಟ್‌ಗಳಲ್ಲಿ, ಟಿ.ವಿ. ಜಾಹೀರಾತುಗಳಲ್ಲಿ ಮಿಂಚಿದ ಆನ್‌ಲೈನ್ ಕಂಪನಿ ಗ್ರಾಹಕರನ್ನು ಸೆಳೆದಂತೆ ಈ ಕಂಪೆನಿ ಕೂಡಾ ಅದೇ ಮಾರ್ಗದಲ್ಲಿ ಯಶಸ್ವಿಯಾಗಿತ್ತು.
ಆರಂಭದಲ್ಲಿ 11,000 ಕಂಪನಿಗೆ ಪಾವತಿಸಿದರೆ ಸದಸ್ಯರಾಗಬೇಕು. ನಂತರ ಪ್ರತಿವಾರ ಸದಸ್ಯರು ತಮಗೆ ನೀಡಲಾದ ಪಾಸ್‌ವರ್ಡ್‌ಗಳನ್ನು ಬಳಸಿ ಬ್ಲಾಗ್/ ವೆಬ್ ಸೈಟ್ ಓಪನ್ ಮಾಡಿದರೆ ಅದರಲ್ಲಿ ದಿನಬಳಕೆ ಕಂಪನಿಗಳ ಹಾಗೂ ಇತರ ಉತ್ಪಾದನೆಗಳಿಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸರಿ ಉತ್ತರಗಳಿಗೆ ಗುರ್ತು ಹಾಕಿದರೆ ಮುಗಿಯಿತು. ಪ್ರತಿ ವಾರವೂ ನಿಮ್ಮ ಅಕೌಂಟಿಗೆ 2000 ರೂ. ಸಂದಾಯ ಮಾಡಲಾಗುತ್ತದೆ.
ಇದೇ ರೀತಿ ವರ್ಷಕ್ಕೆ ಕನಿಷ್ಠವೆಂದರೂ ಒಂದು ಲಕ್ಷ ನಾಲ್ಕು ಸಾವಿರ ಹಣ ನಿಮ್ಮ ಅಕೌಂಟ್ ಸೇರುತ್ತದೆ ಎಂದು ಬ್ಲೇಡ್ ಕಂಪನಿ ತನ್ನ ಗ್ರಾಹಕರನ್ನು ನಂಬಿಸಿತ್ತು. ಸದಸ್ಯರಾದವರು ಮತ್ತೊಬ್ಬರನ್ನು ಈ ಜಾಲಕ್ಕೆ ಸೇರಿಸಿ ಬೋನಸ್ ಪಡೆಯಬಹುದಿತ್ತು. ಆನ್ ಲೈನ್ ಗಲ್ಫ್ ಮೋಸದ ಜಾಲ 250 ರೂ ಬೋನಸ್ ಸಹಾ ನೀಡಿ ಗ್ರಾಹಕರನ್ನು ಹುರಿದುಂಬಿಸಿತ್ತು. ಸದಸ್ಯತ್ವದ ಫೀ ರು 3,600ಕ್ಕೆ ಇಳಿಸಿ ಗ್ರಾಹಕರ ಸಂಖ್ಯೆಯನ್ನು ಹತ್ತು ಪಟ್ಟು ಹೆಚ್ಚಿಸಿಕೊಂಡಿತ್ತು.
ಆದರೆ ಕಳೆದ ಕೆಲದಿನಗಳಿಂದ ಕಂಪನಿ ವೆಬ್ ಸೈಟ್ ಓಪನ್ ಮಾಡಿದರೆ ಅಂಡರ್ ಮೈಂಟೇನೆಂಸ್, ಕಮಿಂಗ್ ಸೂನ್ ಎಂಬ ಫಲಕ ಎದ್ದು ಕಾಣತೊಡಗಿತು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಹಣ ತೊಡಗಿಸಿದ ಎಲ್ಲರೂ ಕಂಗಾಲಾದರು. ಮೂಲಗಳ ಪ್ರಕಾರ ಸುಮಾರು 20 ಲಕ್ಷರೂ ಗೂ ಅಧಿಕ ಹಣವನ್ನು ಈ ಬ್ಲೇಡ್ ಕಂಪನಿ ಗುಳುಂ ಮಾಡಿದೆ.
ಉಡುಪಿ-ಕುಂದಾಪುರ ಪೊಲೀಸರಿಗೂ ಈ ಕೇಸ್ ತಲೆನೋವಾಗಿದ್ದು, ಯಾರನ್ನು ಪ್ರಶ್ನಿಸುವುದು ಎಂಬ ಸಮಸ್ಯೆ ಎದುರಾಗಿದೆ. ಸೈಬರ್ ವಿಭಾಗದ ನೆರವು ಪಡೆದು ಅಹಮದಾಬಾದ್ ಮೂಲದ ಆನ್ ಲೈನ್ ವಂಚಕರನ್ನು ಹಿಡಿಯುವುದಾಗಿ ಉಡುಪಿ ಪೊಲೀಸರು ಭರವಸೆ ನೀಡಿದ್ದಾರೆ.












Click it and Unblock the Notifications