ಅಳಬೇಕಾದವರು ಆಳುವವರು, ಸಂತೋಷ ಹೆಗಡೆ ಅಲ್ಲ!

ಈ ಮುಖಾಂತರ ಹಿಂದೆ ನಾನಾ ಕಾರಣಗಳಿಂದ ಕಣ್ಣೀರುಗರೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಳುವವರ ವರ್ಗಕ್ಕೆ ಲೋಕಾಯುಕ್ತರೂ ಸೇರಿಕೊಂಡಂತಾಗಿದೆ. ಇದೇ ಪಂಗಡಕ್ಕೆ ದೇವೇಗೌಡರು, ಸಿದ್ದರಾಮಯ್ಯನವರು, ಮಲ್ಲಿಕಾರ್ಜುನ ಖರ್ಗೆಯವರು ಕೂಡ ಸೇರಿಕೊಳ್ಳುತ್ತಾರೆ.
ರೆಡ್ಡಿಗಳು ಮೊದಲಬಾರಿಗೆ ತಿರುಗಿಬಿದ್ದಿದ್ದಾಗ ಶೋಭಾ ಕರಂದ್ಲಾಜೆಯನ್ನು ಸಚಿವ ಸ್ಥಾನದಿಂದ ಇಳಿಸಿದಾಗ ಯಡಿಯೂರಪ್ಪ ಕಣ್ಣೀರುಗರೆದಿದ್ದರು. ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ 'ನನಗೇಕೆ ಈ ಶಿಕ್ಷೆ, ಹೇಳಿ ಸ್ವಾಮಿ ಹೇಳಿ' ಅಂತ ಬಹಿರಂಗವಾಗಿ ಇನ್ನೊಮ್ಮೆ ಗದ್ಗದಿತರಾಗಿದ್ದರು. ಇನ್ನು ಕುಮಾರಸ್ವಾಮಿಯವರು, 20 ತಿಂಗಳು ಅಧಿಕಾರ ನಡೆಸಿ ಯಡಿಯೂರಪ್ಪಗೆ ಬಿಟ್ಟುಕೊಡುವಾಗ ಕಣ್ಣೀರಾಗಿದ್ದರು. ಇನ್ನೊಂದು ಬಾರಿ, ಉಪಚುನಾವಣೆಯಲ್ಲಿ ಕಣ್ತುಂಬಿಕೊಂಡು ಮತಯಾಚಿಸಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಿದ್ದರು.
ಈಗ, ಅಕ್ರಮ ಗಣಿಗಾರಿಕೆಯ ವರದಿ ಸಲ್ಲಿಕೆಗೆ ಮುನ್ನವೇ ಸೋರಿಕೆಯಾಗಿದ್ದಕ್ಕೆ ಪಶ್ಚಾತ್ತಾಪಪಟ್ಟು, ಇದರ ಹೊಣೆಯನ್ನು ತಾವೇ ಹೊತ್ತ ಲೋಕಾಯುಕ್ತ ಸಂತೋಷ ಹೆಗಡೆ ಅವರ ಕಣ್ಣುಗಳಲ್ಲಿಯೂ ಚಕ್ರತೀರ್ಥ. ಯಾವ ರಾಜಕಾರಣಿಗಳನ್ನು, ಯಾವ ಅಧಿಕಾರಿಯನ್ನು ನಂಬಲಾಗದ ಈ ಕಾಲದಲ್ಲಿ ವರದಿ ಸೋರಿಕೆಯಾಗಿದ್ದಕ್ಕೇ ಅಳಬೇಕಿತ್ತಾ? ಅಸಲಿಗೆ ಅಳು ಬಂದಿದ್ದಾದರೂ ಏತಕ್ಕೆ?
ಲೋಕಾಯುಕ್ತರಾಗಿ ಸಂತೋಷ ಹೆಗಡೆಯವರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಹೆಜ್ಜೆಹೆಜ್ಜೆಗೂ ನಾನಾ ತೊಡರುಗಳನ್ನು ಎದುರಿಸಿದ್ದಾರೆ. ಹೆಚ್ಚಿನ ಅಧಿಕಾರ ಸಿಗದಿದ್ದಾಗ ಬೇಸತ್ತು ರಾಜೀನಾಮೆಯನ್ನೂ ಒಗಾಯಿಸಿದ್ದರು. ನಂತರ ವಾಪಸ್ ಬಂದು, ತಡವಾಗಿಯಾದರೂ ಅಧಿಕಾರವಧಿ ಮುಗಿಯುವುದರೊಳಗೆ 9000 ಪುಟಗಳ, ಇಡೀ ದೇಶವೇ ಬೆಚ್ಚಿಬೀಳಿಸುವಂಥ ವರದಿಯನ್ನು ತಯಾರಿಸಿದ್ದಾರೆ.
ಇಷ್ಟೆಲ್ಲ ಕಷ್ಟಪಟ್ಟಿದ್ದರೂ ಭ್ರಷ್ಟ ಅಧಿಕಾರಿಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಹತಾಷೆ ಅವರನ್ನು ಕಾಡಿದ್ದರೂ ಆಶ್ಚರ್ಯವಿಲ್ಲ. ವರದಿ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಅಳಬೇಕಿತ್ತಾ? ಆಗಸ್ಟ್ 2ರಂದು ನಿವೃತ್ತರಾಗುತ್ತಿರುವ ಸಂತೋಷ ಹೆಗಡೆ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಪೂರೈಸಿಯಾಗಿದೆ. ಎಲ್ಲವೂ ಕಾನೂನು ಪ್ರಕಾರ ಜರುಗಿದರೆ ಅಳಬೇಕಾದವರು ಆಳುವವರು, ಹೆಗಡೆಯಂಥವರು ಅಲ್ಲ.












Click it and Unblock the Notifications