ಚಿಕ್ಕಬಳ್ಳಾಪುರದಲ್ಲಿ ಬೃಹತ್ ಉದ್ಯೋಗ ಯಜ್ಞ ಆರಂಭ

ನಿರುದ್ಯೋಗದ ಈ ಯುಗದಲ್ಲಿ ಗ್ರಾಮೀಣ ಭಾಗದ ಶಿಕ್ಷಣ ವಂಚಿತ ಉದ್ಯೋಗಾಕಾಂಕ್ಷಿಗಳಿಗೆ ಆಶಾಕಿರಣವಾಗಿ ಮೂಡಿಬಂದಿರುವ '30ನೇ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳ'ಕ್ಕೆ ಕೇಂದ್ರ ನಿಗಮಿಕೃತ ವ್ಯವಹಾರಗಳ ಸಚಿವ ಡಾ: ಎಂ. ವೀರಪ್ಪ ಮೊಯಿಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಇಂಧನ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಿರ್ಮಲಾನಂದಪುರಿ ಸ್ವಾಮೀಜಿ ಅವರು ಶನಿವಾರ ಚಾಲನೆ ನೀಡಿದರು.
ಉದ್ಯೋಗ ಮೇಳ ಪ್ರಾರಂಭವಾದ ಮೊದಲ ಒಂದು ಗಂಟೆಯಲ್ಲಿಯೇ 60 ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿ, ಉದ್ಯೋಗ ಪತ್ರ ವಿತರಿಸಿದ್ದು, ಕಾರ್ಯಕ್ರಮದ ಯಶಸ್ಸಿನ ಮುನ್ಸೂಚನೆಯಾಗಿತ್ತು. ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ ಆಯೋಜಿಸಿದ್ದ ಈ ಬೃಹತ್ ಮೇಳದಲ್ಲಿ 16,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ಅಷ್ಟೇ ಪ್ರಮಾಣದಲ್ಲಿ ಉದ್ಯೋಗಾವಕಾಶಗಳೂ ಇರುವುದು ಗಮನಾರ್ಹ ಸಂಗತಿಯಾಗಿದೆ.
ಬಣ್ಣ ಬಣ್ಣದ ಕಾರ್ಡ್ : ಈ ಮಹಾ ಉದ್ಯೋಗ ಮೇಳದಲ್ಲಿ ನೋಂದಾಯಿತ ಉದ್ಯೋಗಾಕಾಂಕ್ಷಿಗಳಿಗೆ ಅವರ ಶೈಕ್ಷಣಿಕ ಅರ್ಹತೆಗಳನ್ನು ಆಧರಿಸಿ ಎಂಟು ವಿವಿಧ ವರ್ಣಗಳ ಕಾರ್ಡ್‌ಗಳನ್ನು ನೀಡಲಾಗಿದೆ. ಕೈಗಾರಿಕಾ ತರಬೇತಿ ಹಾಗೂ ಡಿಪ್ಲೊಮಾದಾರರಿಗೆ ಹಸಿರು ಕಾರ್ಡ್, ಹತ್ತನೆ ತರಗತಿ ಹಾಗೂ ಪದವಿಪೂರ್ವ ಶಿಕ್ಷಣಪೂರೈಸಿದವರಿಗೆ ಬಿಳಿ ಕಾರ್ಡ್, ಸಾಮಾನ್ಯ ಪದವೀಧರರಿಗೆ ಹಳದಿ ಕಾರ್ಡ್, ಇಂಜಿನಿಯರಿಂಗ್ ಪದವೀಧರರಿಗೆ ನೀಲಿ ಕಾರ್ಡ್, ವೈದ್ಯಕೀಯ ಪದವೀಧರರಿಗೆ ಕೆಂಪುಕಾರ್ಡ್, ಶಿಕ್ಷಣ ಕ್ಷೇತ್ರದಲ್ಲಿ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಕಿತ್ತಲೆ ಬಣ್ಣದ ಕಾರ್ಡ್, ಸ್ನಾತಕೋತ್ತರ ಪದವೀಧರರಿಗೆ ಬೂದು ಬಣ್ಣದ ಕಾರ್ಡ್ ಹಾಗೂ ಇತರೆ ವಿದ್ಯಾರ್ಹತೆ ಹೊಂದಿದವರಿಗೆ ಗುಲಾಬಿ ಬಣ್ಣದ ಕಾರ್ಡ್‌ಗಳನ್ನು ನೀಡಲಾಗಿದೆ.
ಸ್ಥಳದಲ್ಲೇ ಕೆಲಸ : ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಅರಸಿ ಮೇಳಕ್ಕೆ ಆಗಮಿಸುತ್ತಿದ್ದಾರೆ. ಸುಮಾರು ಒಂದು ನೂರಕ್ಕೂ ಹೆಚ್ಚು ಕಂಪನಿಗಳಲ್ಲಿ 16,000 ಉದ್ಯೋಗಾವಕಾಶಗಳಿಗೆ ರಾಜಮಾರ್ಗವಾಗಿರುವ ಈ ಉದ್ಯೋಗ ಮೇಳದಲ್ಲಿ ಮೊದಲು ಕೌಶಲ್ಯ ಮಾಪನ ನಂತರ ಉದ್ಯೋಗಕ್ಕೆ ಸಂದರ್ಶನ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಯಶಸ್ವಿಯಾದವರಿಗೆ ಸ್ಥಳದಲ್ಲಿಯೇ ಫಲಿತಾಂಶ ತಿಳಿಸಿ ಹಸ್ತಲಾಘವದೊಂದಿಗೆ ಉದ್ಯೋಗ ಪತ್ರ ವಿತರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ.
ಯಾವ್ಯಾವ ಕಂಪನಿಗಳು : ಇನ್‌ಫೋಸಿಸ್, ಬಯೋಕಾನ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹ್ಯೂಲೆಟ್ ಪ್ಯಾಕರ್ಡ್ ಅಂತಹ ಸಾಫ್ಟ್‌ವೇರ್ ಕಂಪನಿಗಳು ಎಚ್‌ಡಿಎಫ್‌ಸಿ, ಕಾರ್ವಿಯಂತಹ ಹಣಕಾಸು ಸಂಸ್ಥೆಗಳು, ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿರುವ ರಿಲಯನ್ಸ್ ಕಮ್ಯುನಿಕೇಷನ್ಸ್, ಗಾರ್ಮೆಂಟ್ಸ್ ಕ್ಷೇತ್ರದ ದಿಗ್ಗಜ ಗೋಕುಲದಾಸ್ ಎಕ್ಸ್‌ಪೋರ್ಟ್ಸ್, ಆತಿಥ್ಯ ಕ್ಷೇತ್ರದಲ್ಲಿ ಕಾಫಿ ಡೇ, ಮಹೀಂದ್ರ ಮತ್ತು ಮಹೀಂದ್ರ ಉದ್ಯೋಗಗಳನ್ನು ಒದಗಿಸಲು ಮುಂದಾಗಿದೆ.
ಒಂದು ಮುಂಗಟ್ಟೆಯಲ್ಲಿ ಪ್ರವೇಶಿಸಿ ಉದ್ಯೋಗ ಪಡೆಯುವಲ್ಲಿ ವಿಫಲರಾದವರಿಗೆ ಉದ್ಯೋಗ ಉನ್ನತೀಕರಣ ಕೇಂದ್ರಕ್ಕೆ ತೆರಳಿ, ಅರ್ಹತೆಗೆ ಆಧರಿಸಿ ಉದ್ಯೋಗ ಪಡೆಯುವ ಗುಟ್ಟನ್ನು ಅರಿಯುವ ಅವಕಾಶವನ್ನೂ ಕಲ್ಪಿಸಿರುವುದು ಮೇಳದ ಇತಿಹಾಸದಲ್ಲಿಯೇ ಪ್ರಪ್ರಥಮ.
;










Click it and Unblock the Notifications