ಪೋಸ್ಕೊ ಭೂಸ್ವಾಧೀನ ಸ್ಥಗಿತಕ್ಕೆ ಯಡಿಯೂರಪ್ಪ ದಿಢೀರ್ ಆದೇಶ

yeddyurappa
ಬೆಂಗಳೂರು, ಜುಲೈ14: ಗದಗ ಜಿಲ್ಲೆಯಲ್ಲಿ ಪೋಸ್ಕೊ ಸೇರಿದಂತೆ ಮೂರು ಉಕ್ಕು ಉತ್ಪಾದಕ ಘಟಕಗಳ ಸ್ಥಾಪನೆಗೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ರಾತ್ರಿ ದಿಢೀರನೆ ಆದೇಶಿಸಿದ್ದಾರೆ. ಯಡಿಯೂರಪ್ಪ ಈ ರೀತಿ ಹಿಂದೆ ಸರಿಯುವುದರ ಹಿಂದೇನಿದೆ ಎಂಬುದು ಕುತೂಹಲಕಾರಿಯಾಗಿದೆ.

ಆದರೆ, ಇದು ಪೋಸ್ಕೊ ಯೋಜನೆಯನ್ನು ಸಂಪೂರ್ಣ ಕೈಬಿಡುವ ನಿರ್ಧಾರ ಅಲ್ಲ. ರೈತರು ಸ್ವಯಂಸ್ಪೂರ್ತಿಯಿಂದ ಭೂಮಿ ನೀಡಿದರೆ ಈಗಲೂ ಗದಗದಲ್ಲೇ ಪೋಸ್ಕೊ ಘಟಕ ಸಾಪಿಸಲಾಗುವುದು. ಆದರೆ, ಭೂಸ್ವಾಧೀನಕ್ಕೆ ಬಲವಂತವಿಲ್ಲ ಎಂದು ಮಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸೂಚನೆ ಮೇರೆಗೆ ಗದಗ ಜಿಲ್ಲಾಧಿಕಾರಿ ತೋಂಟದಾರ್ಯ ಶ್ರೀಗಳನ್ನು ಕಂಡು ಪೋಸ್ಕೊ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಿರುವ ಸರ್ಕಾರದ ನಿರ್ಧಾರವನ್ನು ತಲುಪಿಸಿದರು. ಸರ್ಕಾರದ ಈ ತೀರ್ಮಾನಕ್ಕೆ ಶ್ರೀಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಬುಧವಾರ ಮಧ್ಯಾಹ್ನವಷ್ಟೇ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುವುದಿಲ್ಲ. 2-3 ದಿನಗಳಲ್ಲಿ ತಾವೇ ಖುದ್ದಾಗಿ ಗದಗ ಜಿಲ್ಲೆಗೆ ಭೇಟಿ ನೀಡಿ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿಯೂ ಅವರು ತಿಳಿಸಿದ್ದರು.

ಆದರೆ, ರಾತ್ರಿ ಬೆಂಗಳೂರಿಗೆ ಬಂದಿಳಿಯುವಷ್ಟರಲ್ಲಿ ಅವರ ನಿರ್ಧಾರ ಬದಲಾಗಿತ್ತು. ಸದ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಕೈಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದೆ ಸರಿಯುವುದರ ಹಿಂದೇನಿದೆ? : ಈ ಭೂ ವಿವಾದ ರಾಷ್ಟ್ರ ಮಟ್ಟದಲ್ಲಿ ಅಪಪ್ರಚಾರ ಪಡೆದು ಬಿಜೆಪಿ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಬಹುದು ಎಂಬ ಪಕ್ಷದ ವರಿಷ್ಠ ನಾಯಕರ ಸಲಹೆಯ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೂಸ್ವಾಧೀನ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡರು ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಈ ಹೋರಾಟದಲ್ಲಿ ರಾಷ್ಟ್ರೀಯ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದರು. ಜತೆಗೆ ಬುಧವಾರ ಪ್ರತಿಪಕ್ಷಗಳಾದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಗದಗ ಜಿಲ್ಲೆಗೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು.

ಇದೇ ವೇಳೆ ಮಂಗಳವಾರವಷ್ಟೇ ಪೇಜಾವರ ಶ್ರೀಗಳ ಧರಣಿಯ ಬೆದರಿಕೆಗೆ ಮಣಿದು ಮಂಗಳೂರು ಎಸ್‌ಇಝೆಡ್‌ಗಾಗಿ ವಶಪಡಿಸಿಕೊಳ್ಳಲು ಹೊರಟಿದ್ದ 1998 ಎಕರೆ ಭೂಮಿಯನ್ನು ರದ್ದುಪಡಿಸಲಾಗಿತ್ತು. ಇದು ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ ಎಂಬ ದಿಕ್ಕಿನಲ್ಲಿ ಪ್ರತಿಪಕ್ಷಗಳು ಹಾಗೂ ಹೋರಾಟಗಾರರು ಪ್ರಮುಖವಾಗಿ ಪ್ರಸ್ತಾಪಿಸತೊಡಗಿದ್ದು ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿತು.

ಜತೆಗೆ ಶನಿವಾರ ಮತ್ತು ಭಾನುವಾರ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆಯನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭ ಪ್ರತಿಭಟನೆ, ಗದಗ ಜಿಲ್ಲೆ ಬಂದ್‌ನಂಥ ಹೆಜ್ಜೆ ಇರಿಸುವ ಪ್ರಯತ್ನವನ್ನು ವಿವಿಧ ಸಂಘಟನೆಗಳು ನಡೆಸಿದ್ದವು. ಇದೆಲ್ಲದರ ಹಿನ್ನೆಲೆಯಲ್ಲಿ ಸದ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ನಂತರ ಮುಂದೆ ನೋಡಿದರಾಯಿತು ಎಂಬ ನಿಲವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಂದರು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+