ತಿಹಾರ ಜೈಲಿನಲ್ಲಿ ಕೊಬ್ಬು ಕರಗಿಸುತ್ತಿರುವ 2ಜಿ ಮಂದಿ

2ಜಿ ಹಗರಣದ ಆರೋಪಿ ಕನಿಮೋಳಿಯಿಂದ ಹಿಡಿದು ಕಾಮನ್ವೆಲ್ತ್ ಹಗರಣದ ರೂವಾರಿ ಸುರೇಶ್ ಕಲ್ಮಾಡಿಯವರೆಗೆ ಏಷ್ಯಾದಲ್ಲೇ ಅತಿ ದೊಡ್ಡದಾದ ತಿಹಾರು ಜೈಲು ಸೇರಿಕೊಂಡಿರುವ ಶ್ರೀಮಂತ ಕುಳಗಳ ತೂಕ ತನ್ನಷ್ಟಕ್ಕೆ ತಾನೇ ಕಗುತ್ತಿದೆ. ತೂಕ ಇಳಿಸಿಕೊಂಡು ಹಗುರವಾಗಿರುವ ಡಿಎಂಕೆ ಸಂಸದೆ ಕನಿಮೋಳಿ ಸಖತ್ ಖುಷಿಯಾಗಿದ್ದಾರಂತೆ!
ಅತಿ ಹೆಚ್ಚು ತೂಕ ಕಳೆದುಕೊಂಡಿದ್ದು ಕನಿಮೋಳಿಯೇ. ಕೇವಲ ಒಂದೂವರೆ ತಿಂಗಳಲ್ಲಿ ಇವರು 5 ಕೆ.ಜಿ. ಕರಗಿಸಿದ್ದಾರೆ. ನಂತರದ ಸ್ಥಾನ ಶಾಹಿದ್ ಬಲ್ವಾರ. ಭಾರತದ ಕೆಲವೇ ಅತಿ ಶ್ರೀಮಂತರಲ್ಲಿ ಒಬ್ಬರಾಗಿರುವ ಈತ 4.5 ಕೆ.ಜಿ ಇಳಿದಿದ್ದಾರೆ. ಮೂರನೇ ಸ್ಥಾನ ಉಡುಪಿ ಕಲ್ಮಾಡಿಗೆ. ಪುಣೆಯ ಈ ಸಂಸದ 4 ಕೆ.ಜಿ. ಕಡಿಮೆಯಾಗಿದ್ದಾರೆ. ಜೈಲಿನಲ್ಲೇ ಕದ್ದುಮುಚ್ಚಿ ಚಹಾ, ಬಿಸ್ಕತ್ ತರಿಸಿಕೊಂಡು ಮೋಜು ಮಾಡಿದರೂ ಇವರು ತೂಕ ಕಳೆದುಕೊಂಡಿದ್ದಾರೆಂಬುದು ಗಮನಾರ್ಹ.
ವ್ಯಾಯಾಮ ಮಾಡಿಸದೆಯೇ ತೂಕ ಕರಗಿಸುವ ನಿಮ್ಮ ಗುಟ್ಟೇನು ಎಂದು ತಿಹಾರ ಜೈಲಧಿಕಾರಿಯನ್ನು ಕೇಳಲಾಗಿ... 'ಬಹಳ ಸರಳ. ಜೈಲೂಟ ಮತ್ತು ಹಸಿವು ಕಡಿಮೆಯಾಗುವುದೇ ಕಾರಣ. ಜೈಲು ಸೇರಿರುವ ಅವಮಾನವೇ ಸಾಕು, ಇವರಿಗೆಲ್ಲ ಹಸಿವು ಕಡಿಮೆಯಾಗಲು. ಮಾಜಿ ಸಚಿವ ಎ.ರಾಜಾ ಸೇರಿದಂತೆ 2ಜಿ ಹಗರಣದಲ್ಲಿ ಜೈಲು ಸೇರಿರುವ ಎಲ್ಲಾ 14 ಅತಿ ಗಣ್ಯ ಕೈದಿಗಳೂ ತೂಕ ಕಳೆದುಕೊಂಡಿದ್ದಾರೆ. ಹಾಗೆ ನೋಡಿದರೆ ಕನಿಮೋಳಿ ಮತ್ತು ರಾಜಾ ಅವರಿಗೆ ಮನೆಯೂಟ ಸಿಗುತ್ತಿದೆ. ಆದರೆ ಇಲ್ಲಿನ ಒತ್ತಡಕ್ಕೇ ತೂಕ ಕರಕರಗಿ ನೀರಾಗಿದೆ' ಎಂದಿದ್ದಾರೆ. ಪಾಪ, ಅವರು ತಾನೇ ಏನು ಮಾಡಿಯಾರು?












Click it and Unblock the Notifications