ಪುಣ್ಯಕ್ಷೇತ್ರದಲ್ಲಿ ರಾಜಕೀಯ ಮಾತಾಡಲ್ಲ : ಧರ್ಮಸ್ಥಳದಲ್ಲಿ ಯಡಿಯೂರಪ್ಪ

ಮಂಜುನಾಥನ ದರ್ಶನ ಪಡೆದು ಹೊರಬಂದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಈ ಪುಣ್ಯಕ್ಷೇತ್ರದಲ್ಲಿ ರಾಜಕೀಯದ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂದರು. ರಾಜಕೀಯ ಗೊಂದಲ, ಆಣೆ ಪ್ರಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪನವರ ಉತ್ತರ ಈ ರೀತಿಯಾಗಿತ್ತು.
ಪೂಜ್ಯರಾದ ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳು, ಸಿದ್ದಗಂಗಾ ಶ್ರೀಗಳು, ತರಳಬಾಳು ಶ್ರೀಗಳು, ಪಂಚಪೀಠದ ಶ್ರೀಗಳು ಮತ್ತು ಹಿರಿಯ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಅವರ ಮಾರ್ಗದರ್ಶನ ಪಡೆದು ದರ್ಶನಕ್ಕೆ ಮಾತ್ರ ಬಂದಿದ್ದೇನೆ ಎಂದು ಅವರು ನುಡಿದರು.
ರಾಜ್ಯದ ಸುಭೀಕ್ಷೆ ಹೊರತು ಬೇರೇನನ್ನೂ ಮಂಜುನಾಥನ ಬಳಿ ಕೇಳಲಿಲ್ಲ. ರಾಜ್ಯದ ಅಭಿವೃದ್ಧಿಯೇ ನನ್ನ ಮಂತ್ರವಾಗಲಿದೆ. ಹಣಕಾಸು ಪರಿಸ್ಥಿತಿ, ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ. ಜನರು ನಿರಂತರವಾಗಿ ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿ ಆಶೀರ್ವದಿಸುತ್ತ ಬಂದಿದ್ದಾರೆ ಎಂದು ಅವರು ಹೇಳಿದರು.
ಮುಂದಿನ ಎರಡು ವರ್ಷಗಳ ಕಾಲ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು, ಅನ್ನದಾತ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂದು ಹೇಳಿದ ಅವರು, ದೇವಸ್ಥಾನದ ಹೊರಗಡೆ ಧಿಕ್ಕಾರ ಕೂಗುತ್ತಿದ್ದ ಅನ್ನದಾತರ ಕುರಿತು ಮತ್ತು ದರ್ಶನ ಸಿಗದೆ ಆಕ್ರೋಶಗೊಂಡಿರುವ ಸಾರ್ವಜನಿಕರ ಕುರಿತು ಏನ್ನೂ ಹೇಳಲಿಲ್ಲ.












Click it and Unblock the Notifications