ಕೊಚ್ಚಿಯಲ್ಲಿ SIMI ಮಾಜಿ ಅಧ್ಯಕ್ಷ ಸಲಾವುದ್ದೀನ್ ಸಲಾಂ ಸೆರೆ

ಮೂರು ದಿನಗಳ ಟ್ರಾನ್ಸಿಟ್ ವಾರಂಟ್ ಮೇಲೆ ಅವನನ್ನು ಇಂದೋರ್ ಗೆ ಕರೆದೊಯ್ಯಲು ಅಲುವದ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಒಪ್ಪಿಗೆ ನೀಡಿದ್ದಾರೆ. ಸಲಾವುದ್ದೀನ್‌ನನ್ನು ಉಜ್ಜಯಿನಿಯ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಸೋಮವಾರ ಹಾಜರುಪಡಿಸಲಾಗುತ್ತದೆ. ಸಲಾವುದ್ದೀನ್ ಮೂಲತಃ ಆಂಧ್ರಪ್ರದೇಶದವ, ಹೈದರಾಬಾದಿಗೆ ತೆರಳಲು ಅವನು ಇಲ್ಲಿಗೆ ಬಂದಿಳಿದಿದ್ದ ಎನ್ನಲಾಗಿದೆ.
40 ವರ್ಷದ ಸಲಾವುದ್ದೀನ್ ವಿರುದ್ಧ ಮಧ್ಯಪ್ರದೇಶದ ಮಹಾಕಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಲವಾರು ಪ್ರಕರಣಗಳಲ್ಲಿ ಕರ್ನಾಟಕ ಪೊಲೀಸರಿಗೂ ಈತ ಬೇಕಾಗಿದ್ದ ಎಂದು ಮೂಲಗಳು ತಿಳಿಸಿವೆ. ಆದರೆ ಸಲಾವುದ್ದೀನ್ ತಲೆಮರೆಸಿಕೊಂಡಿದ್ದ. ಶನಿವಾರ ಬೆಳಗ್ಗೆ 9 ಗಂಟೆಗೆ ದುಬೈ- ಕೊಚ್ಚಿ ವಿಮಾನದಲ್ಲಿ ಆತ ಬಂದಿಳಿಯುವ ಮಾಹಿತಿಯನ್ನು ಮಧ್ಯಪ್ರದೇಶದ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಏರ್ ಪೋರ್ಟ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಅವನನ್ನು ಬಂಧಿಸಲಾಯಿತು.
ಸಲಾವುದ್ದೀನ್ ಜತೆಗೆ ಒಬ್ಬ ಮಹಿಳೆ ಹಾಗೂ ಒಂದು ಮಗು ಕೂಡ ಇತ್ತು. ಆ ಮಹಿಳೆ ಅವನ ದೂರದ ಸಂಬಂಧಿ ಎನ್ನಲಾಗಿದ್ದು, ಆಕೆಯನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಸಲಾವುದ್ದೀನ್ ಬಳಿ ಮಧ್ಯಪ್ರದೇಶದಲ್ಲಿ ವಿತರಿಸಲಾಗಿರುವ ಪಾಸ್‌ಪೋರ್ಟ್ ದೊರೆತಿದೆ. ಕೆಲವು ಬಾಂಬ್ ಸ್ಫೋಟ ಪ್ರಕರಣಗಳ ಸಂಬಂಧ ಈತ ಮಧ್ಯಪ್ರದೇಶ ಪೊಲೀಸರಿಗೆ ಬೇಕಾಗಿದ್ದ ಎಂದು ಮೂಲಗಳು ತಿಳಿಸಿವೆ.
ಸಿಮಿ ನಿಷೇಧಿತ ಸಂಘಟನೆ: ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ನಿಷೇಧಿತ ಸಂಘಟನೆ. ಇದು ಸ್ಥಾಪನೆಯಾಗಿದ್ದು 1977ರ ಏಪ್ರಿಲ್‌ನಲ್ಲಿ. ಉತ್ತರಪ್ರದೇಶದ ಅಲಿಗಢದಲ್ಲಿ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತವನ್ನು ಮುಕ್ತಗೊಳಿಸುವುದು ಹಾಗೂ ಇಸ್ಲಾಂ ಸಂಹಿತೆಗಳನ್ನು ಪಾಲಿಸುವಂತೆ ಮುಸ್ಲಿಮ್ ಸಮಾಜವನ್ನು ಪ್ರೋತ್ಸಾಹಿಸುವುದು ಈ ಸಂಘಟನೆಯ ಉದ್ದೇಶವಾಗಿತ್ತು. ಆದರೆ ಭಯೋತ್ಪಾದನೆಯಲ್ಲೂ ಈ ಸಂಘಟನೆ ತೊಡಗಿದ್ದ ಹಿನ್ನೆಲೆಯಲ್ಲಿ 2002ರಲ್ಲಿ ಎನ್‌ಡಿಎ ಸರ್ಕಾರ ಸಿಮಿಗೆ ನಿಷೇಧ ಹೇರಿತ್ತು. 2008ರ ಆಗಸ್ಟ್‌ನಲ್ಲಿ ವಿಶೇಷ ನ್ಯಾಯಾಧಿಕರಣ ಈ ನಿಷೇಧವನ್ನು ಹಿಂತೆಗೆದಿತ್ತು. ಅದೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಸಿಮಿ ಮೇಲಿನ ನಿಷೇಧ ಮುಂದುವರಿಸಲು ಆದೇಶಿಸಿತ್ತು. ಈ ಸಂಘಟನೆ ಹೊಸ ರೂಪದಲ್ಲಿ ಜನ್ಮತಾಳಿರುವ ಬಗ್ಗೆಯೂ ವರದಿಗಳಿವೆ.











Click it and Unblock the Notifications