ಹುಣಸೂರು ವಿದ್ಯಾರ್ಥಿಗಳನ್ನು ಕೊಂದದ್ದು ಕಿಲ್ಲರ್ KFD

ಗೃಹ ಸಚಿವ ಆರ್ ಅಶೋಕ್ ಅವರು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಕೆಎಫ್ ಡಿಗೆ ಹಣ ಸಂಗ್ರಹಿಸುವ ಸಲುವಾಗಿ ಸಂಘಟನೆಯ ಕಾರ್ಯಕರ್ತರು ಮೊದಲು ಸುಧೀಂದ್ರನನ್ನು ಅಪಹರಿಸುವ ಯೋಜನೆ ರೂಪಿಸಿಕೊಂಡಿದ್ದರು. ಆರು ಕೋಟಿ ರುಪಾಯಿ ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಯೋಜನೆ ಜಾರಿಯಲ್ಲಿ ಯಡವಟ್ಟಾಗಿ ವಿಘ್ನೇಶ್ ನನ್ನೂ ಅಪಹರಿಸಿದರು. ಕೊನೆಗೆ ತಮ್ಮ ಪ್ಲಾನ್ ವಿಫಲವಾಗುತ್ತಿರುವುದನ್ನು ಮನದಟ್ಟಾದಾಗ ಇಬ್ಬರನ್ನೂ ಸಾಯಿಸಿದ್ದಾರೆ ಎಂದು ಅಶೋಕ್ ವಿವರಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ (ಜ್ಞಾನಭಾರತಿ) ಬಳಿ ಎಲ್ಲ ಪಾತಕಿಗಳನ್ನು ಸೆರೆ ಹಿಡಿಯಲಾಗಿದ್ದು, ಆದಿಲ್ ಪಾಷಾ, ಕೌಸರ್, ಸಮೀರ್ ಅಹಮದ್, ಅಸಾವುರ್ ಖಾನ್, ರೆಹಮಾನ್ ಮತ್ತು ಅತಾವುಲ್ಲಾ ಖಾನ್ ಎಂದು ಆರೋಪಿಗಳನ್ನು ಗುರುತಿಸಲಾಗಿದೆ.
ಕೆಎಫ್ ಡಿ ಕಾರ್ಯಕರ್ತರ ಈ ತಂಡವು ಮೂರ್ನಾಲ್ಕುಬಾರಿ ಸುಧೀಂದ್ರನ ಅಪಹರಣಕ್ಕೆ ವಿಫಲ ಪ್ರಯತ್ನ ನಡೆಸಿತ್ತು. ಬಂಧಿತರು ಮೈಸೂರು ಕೋಮುಗಲಭೆಯಲ್ಲೂ ಭಾಗವಹಿಸಿದ್ದರು. ಇಡೀ ರಾಜ್ಯ ತಲೆತಗ್ಗಿಸುವಂತಹ ದುಷ್ಕೃತ್ಯವೆಸಗಿರುವ ಪಾತಕರಿಗೆ ಕಠಿಣ ಶಿಕ್ಷೆ ದೊರೆಯುವಂತೆ ಮಾಡಲಾಗುವುದು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ನೇಮಿಸಲಾಗುವುದು. ಸಾಧ್ಯವಾದಲ್ಲಿ ವಿಶೇಷ ನ್ಯಾಯಾಲಯವನ್ನೂ ಸ್ಥಾಪಿಸಲಾಗುವುದು. ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸಿದ 14 ಮಂದಿ ಪೊಲೀಸ್ ತಂಡವನ್ನು ಶ್ಲಾಘಿಸಿದ ಗೃಹ ಸಚಿವ ಅಶೋಕ್ ಅವರು ತಂಡಕ್ಕೆ 2 ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದಾರೆ.
ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (Karnataka Forum for Dignity) ಎಂಬ ವಿದ್ರೋಹಿ ಸಂಸ್ಥೆ ಎಲ್ಲೆಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಿ ಸಂಘಟನೆಯನ್ನು ನಿರ್ಮೂಲನೆಗೊಳಿಸಲು ಪೊಲೀಸರು ಎಲ್ಲಾ ರೀತೀಯ ತನಿಖೆ ಮುಂದುವರೆಸಿದ್ದಾರೆ. ಇದರಲ್ಲಿ ಪೊಲೀಸರು ಯಶಸ್ವಿಯೂ ಆಗುತ್ತಾರೆ ಎಂಬ ಭರವಸೆಯನ್ನು ಗೃಹ ಮಂತ್ರಿ ಆರ್ ಅಶೋಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications