ಪತ್ನಿ ಮೇಲೆ ಸಂಶಯಕ್ಕೆ ಮಗು ಕೊಂದ ಗ್ರೇಟ್ ಫಾದರ್

ಅಪ್ಪ...ಅಪ್ಪ ಎಂದು ಈಗಷ್ಟೇ ಕರೆಯಲು ಕಲಿತ್ತಿದ್ದ ಒಂದೂವರೆ ವರ್ಷದ ಮಗು ಇಂದು ಇನ್ನಿಲ್ಲ. ಕೊಲೆಗಡುಕ ತಂದೆ ರವಿಗೆ ತನ್ನ ಪತ್ನಿ ಸುಮಿತ್ರಾ ಮೇಲಿದ್ದ ಸಿಟ್ಟು ತೀರಿಸಿಕೊಳ್ಳಲು ಸಿಕ್ಕಿದ್ದು ಆತನ ಮಗು. ವಿಷದ ಮಾತ್ರೆಗಳನ್ನು ಬಲವಂತವಾಗಿ ಮಗುವಿನ ಬಾಯಿಗೆ ತಿರುಕಿ ಅಪ್ಪಂದಿರ ಮಾನ ಮರ್ಯಾದೆ ಕಳೆದು ಬಿಟ್ಟಿದ್ದಾನೆ. ಒಳ್ಳೆ ಪತಿಯಾಗದಿದ್ದರೂ ಒಳ್ಳೆ ಅಪ್ಪನಾಗಿಯಾದರೂ ಮಗುವನ್ನು ಉಳಿಸಿಕೊಳ್ಳುವ ಮನಸ್ಸು ಮಾಡದೆ ತನ್ನ ಹಠ ಸಾಧಿಸಿದ್ದಾನೆ.
ಸರಸ್ವತಿಪುರಂನ ಒಂದೇ ಬೀದಿ ನಿವಾಸಿಗಳಾದ ರವಿ ಹಾಗೂ ಸುಮಿತ್ರಾ ಮದುವೆಯಾಗಿ 6 ವರ್ಷ ಗಳು ಕಳೆದಿವೆ. ಮದುವೆ ನಂತರ ಸುಮಿತ್ರಾಳಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಿತ್ತು, ಚಿಕಿತ್ಸೆ ನಂತರ ತವರು ಮನೆ ತಲುಪಿದ ಸುಮಿತ್ರಾ ಮತ್ತೆ ರವಿ ಮನೆಗೆ ಬರಲಿಲ್ಲ.ಆಕೆ ಮುಖ ನೋಡಲ್ಲ ಎಂದು ರವಿ ಕೂಡಾ ನಾಲ್ಕು ವರ್ಷ ದೂರವಿದ್ದ. ಮಗು ಹುಟ್ಟಿದ ಮೇಲೂ ಇಬ್ಬರ ಸಂಸಾರ ನೆಟ್ಟಗಾಗಲಿಲ್ಲ. ವಿರಸ ಎಂಬ ವಿಷಕ್ಕೆ ಸಂಶಯ ಎಂಬ ಕಹಿ ಗುಳಿಗೆ ಸೇರಿ ಮಗುವನ್ನು ಬಲಿ ತೆಗೆದುಕೊಂಡಿದೆ. ರವಿ ಸದ್ಯಕ್ಕೆ ಹುಣಸೂರು ಪೊಲೀಸರ ಅತಿಥಿಯಾಗಿದ್ದಾನೆ.
ಕೊಲೆ ಮಾಡಿದ್ದು ಹೀಗೆ:ಇದು ನನಗೆ ಹುಟ್ಟಿದ ಮಗುವಲ್ಲ ಎಂದು ಹೆಂಡತಿಯ ಶೀಲಶಂಕಿಸುತ್ತಾ ರವಿ ದಿನಕಳೆಯುತ್ತಿದ್ದ. ಒಂದು ದಿನ ಮಧ್ಯಾಹ್ನ ಮನೆಯಲ್ಲಿ ಆಟವಾಡುತ್ತಿದ್ದ ಮಗುವನ್ನು ಪಕ್ಕದ ಶನೀಶ್ವರ ದೇವಾಲಯದ ಬಳಿಗೆ ಕರೆದೊಯ್ದು ಸಿಹಿ ತಿಂಡಿಯಲ್ಲಿ ವಿಷಬೆರೆಸಿ ನೀಡಿದ್ದಾನೆ. ಇದನ್ನು ಅರಿಯದ ಮಗು ಅದನ್ನು ಸೇವಿಸಿ ಅಸ್ವಸ್ಥಗೊಂಡಿದೆ. ಕೂಡಲೇ ಅಕ್ಕಪಕ್ಕದವರ ಸಹಾಯದಿಂದ ಸುಮಿತ್ರಾ ಮಗುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ನಿಶೋರ್ ಮೃತ ಪಟ್ಟಿದ್ದಾನೆ.












Click it and Unblock the Notifications