ಇಷ್ಟಕ್ಕೂ ಯಡಿಯೂರಪ್ಪ ರಾಜಿ ಮಾತುಕತೆಗೆ ಯತ್ನಿಸಿದ್ದರೆ?

'ಸುವರ್ಣ ನ್ಯೂಸ್ ಚಾನೆಲ್'ಗೆ ಗುರುವಾರ ರಾತ್ರಿ ನೀಡಿರುವ ಸಂದರ್ಶನದಲ್ಲಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ತಾವು ಹಾವು ಬಿಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಕೆಲವು ಸಂದರ್ಭ ಸಾಕ್ಷ್ಯಗಳನ್ನು ಗಮನಿಸಿದಾಗ...
ಯಡಿಯೂರಪ್ಪ ಅವರು ಕೊಟಕ್ಕಲ್ ಆಸ್ಪತ್ರೆಗೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ದೇವೇಗೌಡರನ್ನು ಏಕವಚನದಲ್ಲಿಯೇ ಎಕ್ಕಾಮಕ್ಕಾ ಬೈದಾಡಿದ್ದರು. ಇಂತಹ ಮನಸ್ಥಿತಿಯಲ್ಲಿ ಯಡಿಯೂರಪ್ಪ ಅವರು ದೇವೇಗೌಡರ ಪುತ್ರನೊಂದಿಗೇ ರಾಜಿ ಮಾತುಕತೆಗೆ ಹಾತೊರೆದರೆ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸಂದರ್ಶನದ ಒಂದು ಹಂತದಲ್ಲಿ ಕುಮಾರಸ್ವಾಮಿ ಅವರು 'ನಮ್ಮಪ್ಪನನ್ನು ಅವಯ್ಯ ಹುಬ್ಬಳ್ಳಿಯಲ್ಲಿ ಬಾಯಿಗೆ ಬದಂತೆ ಜರಿದ. ಅದಕ್ಕೇ ಪಿತೃಪ್ರೇಮ ಪಾಶದಲ್ಲಿ ಸಿಕ್ಕಿ ನಾನೂ ಹಾವು ಬಿಟ್ಟೆ' ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಒಂದು ಸಂದರ್ಭದಲ್ಲಿ, 'ಸಂಧಾನ ಪ್ರಯತ್ನ ಆರೋಪಕ್ಕೆ ಯಾವಾಗ ಸಾಕ್ಷ್ಯ ಬಹಿರಂಗಪಡಿಸುತ್ತೀರಿ' ಎಂದು ಬಿಜೆಪಿ ನಾಯಕ ಧನಂಜಯ್ ಕುಮಾರ್ ಕೇಳಿದಾಗ 'ಸಾಕ್ಷ್ಯ ಬಹಿರಂಗಪಡಿಸಿದರೆ ಯಡಿಯೂರಪ್ನೋರ ಕೈಲಿ ರಾಜೀನಾಮೆ ಕೊಡಿಸ್ತೀರೇನು?' ಎಂದು ಕುಮಾರಸ್ವಾಮಿ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಶರಣಾದರು.
ತಮ್ಮ ಮತ್ತು ಕುಟುಂಬದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಕುಮಾರಸ್ವಾಮಿ ಇಂತಹ ಗಿಮಿಕ್ ರಾಜಕಾರಣಕ್ಕೆ ಇಳಿದರೇನು ಎಂಬುದು ಇಲ್ಲಿರುವ ಸಹಜ ಅನುಮಾನ.
ಒಂದಂತು ಸ್ಪಷ್ಟವಾಗಿದೆ. ಎರಡೂ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕೆ ಪ್ರಯತ್ನ ನಡೆಸುತ್ತಿವೆಯೇ ಹೊರತು ಮತ್ತೇನು ಇಲ್ಲ ಎಂಬುದು ಜನರಿಗೆ ಅರ್ಥವಾಗಿದೆ. ಕುಮಾರಸ್ವಾಮಿ ಎಷ್ಟೇ ಆರೋಪ ಮಾಡಿದ್ದರೂ ಸಹ ಅದಕ್ಕೆ ರಾಜ್ಯದಲ್ಲಿ ಜನರ ಸ್ಪಂದನೆ ಏನು ಸಿಕ್ಕಿಲ್ಲ. ಸರ್ಕಾರದ ವಿರುದ್ಧ ಪಕ್ಷಾತೀತ ಹೋರಾಟ ಮಾಡಲು ಹೋದಾಗಲೂ ಮುಖಭಂಗಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಆರೋಪಗಳಿಗೆ ಮತ್ತಷ್ಟು ಇಂಬುಕೊಟ್ಟುಕೊಳ್ಳಲು ಇಂತಹ ಪ್ರಯತ್ನ ಮಾಡಿದರೇನೋ ಅನಿಸುತ್ತದೆ.












Click it and Unblock the Notifications