• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾಜನ ಕಾಲೇಜು ವಿದ್ಯಾರ್ಥಿಗಳ ಹತ್ಯೆ: ಕಾರಣ ಇನ್ನೂ ನಿಗೂಢ

By Srinath
|
ಹುಣಸೂರು, ಜೂನ್ 15: ಮೈಸೂರು ಮಹಾಜನ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಾದ ಸುಧೀಂದ್ರ ಮತ್ತು ವಿಘ್ನೇಶ್ ಅವರುಗಳ ಅಪಹರಣ ಮತ್ತು ಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ. ಬೆಂಗಳೂರು ನಗರ ಅಪರಾಧ ವಿಭಾಗದ ಅಧಿಕಾರಿಗಳೂ ಸೇರಿದಂತೆ ಐದು ಮಂದಿ ಪೊಲೀಸರ ತಂಡ ಹುಣಸೂರಿನಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸಿ, ಕಾರ್ಯಾಚರಣೆ ಮುಂದುವರಿಸಿದೆ.

ವಿದ್ಯಾರ್ಥಿಗಳಿಬ್ಬರ ಹತ್ಯೆ ಹಿನ್ನೆಲೆಯಲ್ಲಿ ಸುಮಾರು 40 ಅಂಶಗಳನ್ನು ಇಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಸುಧೀಂದ್ರನ ತಂದೆ ಮೋಹನ್‌ಕುಮಾರ್ ಮತ್ತು ಅವರ ಸಂಬಂಧಿಗಳು ಇತರ ನಾಲ್ಕು ಮಂದಿ ಜೊತೆಗೆ ಸೇರಿ ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಆಸ್ತಿ ಖರೀದಿಗೆ ಪ್ರಯತ್ನಿಸಿದ್ದರು.

ಈ ಆಸ್ತಿಯ ಮೊತ್ತ ಸುಮಾರು 45ರಿಂದ 50 ಕೋಟಿ ರೂಪಾಯಿಗಳಾಗಬಹುದು. ಇದನ್ನು ತಿಳಿದವರೇ ಮೋಹನ್‌ಕುಮಾರ್ ಪುತ್ರ ಸುಧೀಂದ್ರನನ್ನು ಅಪಹರಣಕ್ಕೆ ಯತ್ನಿಸಿರಬಹುದೇ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸುಧೀಂದ್ರನ ತಂದೆ ಮೋಹನ್‌ಕುಮಾರ್, ವಿಘ್ನೇಶನ ತಂದೆ ಶ್ರೀನಾಥ್ ಅವರ ವ್ಯವಹಾರಗಳು, ಈ ಇಬ್ಬರು ವಿದ್ಯಾರ್ಥಿಗಳ ನಡವಳಿಕೆ, ಸ್ನೇಹಿತರೊಂದಿಗಿನ ಸಂಬಂಧ ಮುಂತಾದ ಎಲ್ಲ ಕೋನಗಳಿಂದಲೂ ತನಿಖೆಯನ್ನು ಆರಂಭಿಸಲಾಗಿದೆ.

ಈವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪದವಿ ಕಾಲೇಜಿನಲ್ಲಿ ಬಿಬಿಎಂ ಅಭ್ಯಾಸ ಮಾಡುತ್ತಿದ್ದ ಸುಧೀಂದ್ರ ಮತ್ತು ವಿಘ್ನೇಶ್ ಜೂನ್ 8ರಂದು ಪರೀಕ್ಷೆಗಾಗಿ ಒಟ್ಟಿಗೇ ಹುಣಸೂರನ್ನು ಬಿಟ್ಟರು. ಆದರೆ ಇಬ್ಬರೂ ಕೂಡ ಪರೀಕ್ಷೆಗೆ ಹೋಗದಿರುವ ಬಗ್ಗೆ ಮೊದಲೇ ನಿರ್ಧರಿಸಿದ್ದರು. ಯಾಕೆಂದರೆ ವಿಘ್ನೇಶ್ ಆತನ ಸ್ನೇಹಿತನೊಬ್ಬನಿಗೆ ದೂರವಾಣಿ ಕರೆ ಮಾಡಿ ನಾವು ಇಂದು ಪರೀಕ್ಷೆಗೆ ಬರುವುದಿಲ್ಲ' ಎಂದು ಹೇಳಿದ್ದ.

ಆದರೆ ಇಬ್ಬರೂ ಕಾಲೇಜಿನ ಬಳಿ ಹೋಗಿದ್ದರು. ಪರೀಕ್ಷೆಗೆ ಮೊದಲು ಈ ಇಬ್ಬರೂ ಕಾಲೇಜಿನ ಹತ್ತಿರದಲ್ಲಿಯೇ ಇರುವ ಉದ್ಯಾನದಲ್ಲಿ ಓದಿಕೊಳ್ಳುತ್ತಿರುವುದನ್ನು ಅವರ ಸಹಪಾಠಿಗಳು ಗಮನಿಸಿದ್ದಾರೆ. ಕಾಲೇಜಿನ ಹತ್ತಿರದಲ್ಲಿಯೇ ಇರುವ ತಮ್ಮ ಸಂಬಂಧಿಗೆ ಮಧ್ಯಾಹ್ನ 12.30ರ ವೇಳೆಗೆ ದೂರವಾಣಿ ಕರೆಯನ್ನೂ ಮಾಡಿದ್ದರು.

ನಂತರ ಮಧ್ಯಾಹ್ನ 2.30ರ ವೇಳೆಗೆ ಸುಧೀಂದ್ರ ತನ್ನ ತಂದೆಗೆ ಮೊಬೈಲ್‌ನಿಂದ ಕರೆ ಮಾಡಿ ತಾನು ಅಪಹರಣವಾಗಿರುವ ವಿಷಯವನ್ನು ತಿಳಿಸಿದ. ಈ ಕರೆ ಎಲ್ಲಿಂದ ಬಂದಿದೆ ಎನ್ನುವುದನ್ನು ಪತ್ತೆ ಹಚ್ಚಿದಾಗ ಇದು ಮೈಸೂರು-ಬೆಂಗಳೂರು ರಸ್ತೆಯ ಕ್ಯಾತಮಾರನಹಳ್ಳಿಯಿಂದ ಬಂದಿದ್ದು ಎನ್ನುವುದು ಪತ್ತೆಯಾಗಿದೆ. ಆಶ್ಚರ್ಯ ಎಂದರೆ 2.59ರ ವೇಳೆಗೆ ವಿಘ್ನೇಶನ ಮೊಬೈಲ್‌ನಿಂದ ಹುಣಸೂರು ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಬಳಿಯಿಂದಲೇ ಕರೆ ಮಾಡಿದ್ದು ಕೂಡ ಪತ್ತೆಯಾಗಿದೆ.

ಅಂದರೆ ವಿಘ್ನೇಶ್, ಸುಧೀಂದ್ರನ ಜೊತೆಗೆ ಇರಲಿಲ್ಲವೇ? ಅಥವಾ ಅಪಹರಣಕಾರರು ಪೊಲೀಸರನ್ನು ದಿಕ್ಕು ತಪ್ಪಿಸಲು ಇಂತಹ ಸಂಚನ್ನು ಮಾಡಿರಬಹುದೇ ಎಂಬುದು ಈಗ ಪೊಲೀಸರ ತಲೆ ತಿನ್ನುತ್ತಿದೆ. ಇದಲ್ಲದೆ ಸುಧೀಂದ್ರನ ಅಪಹರಣವಾದ ದಿನ ಅಂದರೆ ಜೂನ್ 8ರಂದು ಆತನ ಇನ್ನೊಬ್ಬ ಸ್ನೇಹಿತ ಸುಧೀಂದ್ರನ ಮೊಬೈಲ್‌ಗೆ 10-15 ಕರೆಗಳನ್ನು ಮಾಡಿದ್ದಾನೆ. 30-40 ನಿಮಿಷಗಳ ಕಾಲ ಮಾತನಾಡಿರುವುದೂ ಪತ್ತೆಯಾಗಿದೆ.

ಇನ್ನೂ ಅಚ್ಚರಿಯ ಅಂಶವೆಂದರೆ ಸುಧೀಂದ್ರನ ಜೊತೆ ವಿಘ್ನೇಶನನ್ನು ಅಪಹರಿಸಿದ್ದರೂ ಅಪಹರಣಕಾರರು ಒಂದು ಬಾರಿಯೂ ವಿಘ್ನೇಶ್ ಪೋಷಕರಿಗೆ ದೂರವಾಣಿ ಕರೆ ಮಾಡಿರಲಿಲ್ಲ. ಈ ಬಗ್ಗೆ ಕೂಡ ಪೊಲೀಸರು ಈಗ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಜೂನ್ 11ರಂದು ರಾತ್ರಿ ಚಿಕ್ಕಬಳ್ಳಾಪುರದ ಬಳಿ ಸುಧೀಂದ್ರ ಮತ್ತು ವಿಘ್ನೇಶ್ ಅವರ ಶವಗಳು ಪತ್ತೆಯಾಗಿದ್ದವು. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಇಬ್ಬರ ಜಠರಗಳೂ ಖಾಲಿ ಇದ್ದು ಅಪಹರಣದ ನಂತರ ಇವರಿಗೆ ಊಟವನ್ನೂ ನೀಡಿರಲಿಕ್ಕಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.

ಅಪಹರಣಕಾರರಿಗೆ ಸುಧೀಂದ್ರನ ತಂದೆ ಮೋಹನ್‌ಕುಮಾರ್ ಮನೆಯಲ್ಲಿ ನಡೆಯುತ್ತಿದ್ದ ವಿಷಯಗಳೆಲ್ಲಾ ತಿಳಿಯುತ್ತಿತ್ತು. ಈ ಮಾಹಿತಿಯನ್ನು ನೀಡುತ್ತಿದ್ದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ.

ನಿಮ್ಮ ಮಕ್ಕಳನ್ನು ಅಪಹರಣ ಮಾಡಿದ್ದು ಹಣವನ್ನು ಇಂತಹ ಕಡೆ ತಂದು ಕೊಡಿ' ಎಂದು ಅಪಹರಣಕಾರರು ಹೇಳುವಾಗ ಮೋಹನ್‌ಕುಮಾರ್ ಮನೆಯ ವಿದ್ಯಮಾನಗಳನ್ನೂ ಅವರು ಹೇಳುತ್ತಿದ್ದರು ಎನ್ನಲಾಗಿದೆ. ಮೋಹನ್‌ಕುಮಾರ್ ಅವರು ಹಣ ಸಿದ್ಧ ಇದೆ. ಎಲ್ಲಿಗೆ ತರಬೇಕು' ಎಂದು ಕೇಳಿದಾಗ ಯಾಕೆ ಸುಳ್ಳು ಹೇಳುತ್ತೀರಿ? ಮನೆಯ ಗೇಟ್ ಹಾಕಿಯೇ ಇದೆ. ಕಾರನ್ನು ಹೊರಗೇ ತೆಗೆದಿಲ್ಲ' ಎಂದು ಅಪಹರಣಕಾರ ಪ್ರಶ್ನೆ ಮಾಡಿದನಂತೆ.

ಮೋಹನ್‌ಕುಮಾರ್ ಅವರು ದೈವ ಭಕ್ತರು. ಪ್ರತಿ ದಿನ ತಮ್ಮ ವ್ಯಾಪಾರ ಮುಗಿಸಿದ ನಂತರ ಅವರು ಪಟ್ಟಣದ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರಂತೆ. ಅಪಹರಣಕಾರರು ಇದನ್ನೂ ಪ್ರಸ್ತಾಪಿಸಿ ದೇವಾಲಯಗಳಿಗೆ ಭೇಟಿ ನೀಡುವುದನ್ನು ನಿಲ್ಲಿಸಿ. 5 ಕೋಟಿ ರೂಪಾಯಿ ಕೊಟ್ಟು ಮಕ್ಕಳನ್ನು ಬಿಡಿಸಿಕೊಳ್ಳಿ' ಎಂದೂ ಹೇಳಿದ್ದರಂತೆ. ಈ ಎಲ್ಲ ಅಂಶಗಳನ್ನು ಪೊಲೀಸರು ಈಗ ಕಲೆ ಹಾಕಿದ್ದು ಸ್ಥಳೀಯರೇ ಅಪಹರಣಕಾರರಾಗಿರಬೇಕು ಅಥವಾ ಅಪಹರಣಕಾರರಿಗೆ ನೆರವಾಗಿರಬೇಕು ಎಂಬ ದಿಕ್ಕಿನಲ್ಲಿಯೂ ತನಿಖೆ ಆರಂಭಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kidnapped Hunasur students killing case: Police find no clues yet. Investigation on full swing.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more