ವಕೀಲರ ಸಂಘಕ್ಕೆ ಚುನಾವಣೆ: ತಯಾರು ಜೋರು

ಬಾರ್ ಕೌನ್ಸಿಲ್‌ಗೆ ರಾಜ್ಯಾದ್ಯಂತ ಸದಸ್ಯರಿದ್ದು, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. 25 ನಿರ್ದೇಶಕರ ಹುದ್ದೆಗೆ 96 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಾಶಸ್ತ್ಯ ಮತಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಕೆಲವು ಅಭ್ಯರ್ಥಿಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿ ತಾಲ್ಲೂಕುಗಳಿಗೂ ಭೇಟಿ ನೀಡಿ ವೈಯಕ್ತಿಕವಾಗಿ ವಕೀಲರನ್ನು ಸಂಪರ್ಕಿಸಿ ಮತಯಾಚಿಸಿದ್ದಾರೆ.
ಜೂ.13 ರಂದು ಆರಂಭವಾಗುವ ಮತ ಏಣಿಕೆ ಪ್ರಕ್ರಿಯೆ, ನಿರಂತರವಾಗಿ ಸುಮಾರು 25 ದಿನ ನಡೆಯಲಿದೆ. ಬೇರೆ ಸಂಘ-ಸಂಸ್ಥೆಗಳಿಗೆ ನಡೆಯುವ ಚುನಾವಣೆಯಾದರೆ, ಒಂದೇ ದಿನದಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಆದರೆ ಬಾರ್ ಕೌನ್ಸಿಲ್ ಚುನಾವಣೆಯ ಫಲಿತಾಂಶಕ್ಕೆ 20 ರಿಂದ 25 ದಿನ ಕಾಯಬೇಕಾಗುತ್ತದೆ.
ಮೇ 31ರ ವರೆಗೆ ಬಾರ್ ಕೌನ್ಸಿಲ್‌ನಲ್ಲಿ ವಕೀಲಿ ವೃತ್ತಿಗೆ ಹೆಸರು ನೋಂದಾಯಿಸಿರುವ ಪದವೀಧರರು ಮತದಾನದ ಹಕ್ಕು ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟು 71,600 ಮತದಾರರಿದ್ದಾರೆ. ಅದರಲ್ಲಿ ರಾಜಧಾನಿ ಬೆಂಗಳೂರಿನಲ್ಲೇ 36 ಸಾವಿರ ಮತದಾರರಿರುವುದು ವಿಶೇಷ. ಪ್ರತಿ ತಾಲ್ಲೂಕಿನಲ್ಲಿ ಸರಾಸರಿ 150 ಹಾಗೂ ಜಿಲ್ಲಾ ಕೇಂದ್ರದಲ್ಲಿ 350 ಮತದಾರರಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು ಜಯಗಳಿಸುವುದು ಸುಲಭದ ಮಾತಲ್ಲ. ಆಯಾ ಪ್ರಾಂತ್ಯ ಹಾಗೂ ಸ್ಥಳೀಯ ಅಭ್ಯರ್ಥಿಗಳ ವರ್ಚಸ್ಸು ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. ಕಳೆದ ಚುನಾವಣೆಯಲ್ಲಿ 111 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಹಾಲಿ ಅಧ್ಯಕ್ಷ ಜಯಕುಮಾರ್ ಎಸ್. ಪಾಟೀಲ್, ಮಾಜಿ ಅಧ್ಯಕ್ಷ ಸದಾಶಿವ ರೆಡ್ಡಿ, ಉಪಾಧ್ಯಕ್ಷ ಪಿ.ಪಿ. ಹೆಗಡೆ, ವಕೀಲರಾದ ಶಂಕರಪ್ಪ, ಲೋಕೇಶ್, ಉದಯಕುಮಾರ್, ರುದ್ರೇಗೌಡ, ಕಾಂತರಾಜು ಅವರ ಹೆಸರು ವಕೀಲರ ವಲಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ.
ನಿರ್ದೇಶಕರ ಆಯ್ಕೆಯ ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕಾರ್ಯಕಾರಿಣಿ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಜುಲೈನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ












Click it and Unblock the Notifications