ಹಠಯೋಗಿ ಬಾಬಾಗೆ ಬೆಂಗಳೂರು ಬೆಂಬಲ

ಯೋಗ ಗುರು ಬಾಬಾ ರಾಮ್ ಹಮ್ಮಿಕೊಂಡಿರುವ ಭಷ್ಟ್ರಾಚಾರ ನಿರ್ಮೂಲನೆ ಸತ್ಯಾಗ್ರಹಕ್ಕೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಪತಂಜಲಿ ಯೋಗ ಪೀಠ ಘಟಕವು ರಾಜ್ಯದ ವಿವಿಧೆಡೆ ಸತ್ಯಾಗ್ರಹ, ಜಾಥಾಗಳನ್ನು ಹಮ್ಮಿಕೊಂಡಿದೆ. ಇಂದು ಬೆಳಗ್ಗಿನಿಂದಲೇ ಫ್ರೀಡಂ ಪಾರ್ಕ್ ನತ್ತ ಅನೇಕ ಜನರು ಆಗಮಿಸುತ್ತಿದ್ದಾರೆ. ಶಿವಮೊಗ್ಗ ಸುಬ್ಬಣ್ಣ ಸೇರಿದಂತೆ ಅನೇಕ ಗಾಯಕರು ದೇಶ ಭಕ್ತಿ ಗೀತೆಗಳನ್ನು ಹಾಡಿ, ಯುವಕರನ್ನು ಹುರಿ ದುಂಬಿಸುತ್ತಿದ್ದಾರೆ ಎಂದು ಪತಂಜಲಿ ಯೋಗ ಪೀಠದ ದಯಾನಂದ ಸ್ವಾಮಿ ಹೇಳಿದರು.
ಇಂದು ಇಲ್ಲಿ ಉಪವಾಸ ಕೂರಲಿರುವ ವ್ಯಕ್ತಿಗಳನ್ನು ಮೊದಲಿಗೆ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿ, ದೈಹಿಕವಾಗಿ ಸಮರ್ಥರಿದ್ದರೆ ಎಂದು ವೈದ್ಯರು ಹೇಳಿದ ಮೇಲೆ ಅವರಿಗೆ ವೇದಿಕೆ ಒದಗಿಸಲಾಗುತ್ತಿದೆ. ಯಾರ ಮೇಲೂ ಒತ್ತಡ ಹೇರಿ ಉಪವಾಸ ಸತ್ಯಾಗ್ರಹ ಆಯೋಜಿಸಿಲ್ಲ. ಯಾವುದೇ ರಾಜಕೀಯ ಪಕ್ಷ, ಕೋಮು ಸಂಘಟನೆಯ ಬೆಂಬಲವನ್ನು ಯೋಗ ಪೀಠ ಬಯಸಿಲ್ಲ ಎಂದು ಸ್ವಾಮಿ ತಿಳಿಸಿದರು.
ರಾಜ್ಯದ ಪತಂಜಲಿ ಯೋಗ ಸಂಸ್ಥೆ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸ್ವಾಮೀಜಿಗಳು ಭಾಗವಹಿಸಿದ್ದರು. ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ, ವಿಧಾನಪರಿಷತ್ ಸದಸ್ಯ ಕೃಷ್ಣಭಟ್ ಸೇರಿದಂತೆ ನೂರಾರು ಗಣ್ಯರು, ಸಾರ್ವಜನಿಕರು ರಾಮ್ ದೇವ್ ಪರ ಘೋಷಣೆಗಳನ್ನು ಕೂಗುತ್ತಾ, ಕಪ್ಪುಹಣ ವಾಪಾಸ್ ತರಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.












Click it and Unblock the Notifications