ಬಾಬಾ ರಾಮದೇವ್ ಸಂತ ಕಂ ರಾಜಕಾರಣಿ: ವಿಶ್ವನಾಥ್

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದೇವ್ ಅವರು ಹಮ್ಮಿಕೊಂಡಿರುವ ಚಳವಳಿ ಅರ್ಥಹೀನವಾಗಿದೆ. ಅವರು ಆರು ತಿಂಗಳ ಹಿಂದೆ ರಾಜಕೀಯಕ್ಕೆ ಬರುವ ಬಗ್ಗೆ ಹೇಳಿಕೆ ನೀಡಿದ್ದರು. ಅದು ಈಗ ನಿಜವಾಗುತ್ತಿದ್ದು, ಈಗ ಹಮ್ಮಿಕೊಂಡಿರುವ ಚಳವಳಿ ಅದಕ್ಕೆ ವೇದಿಕೆಯಾಗಿದೆ ಎಂದು ಆರೋಪ ಮಾಡಿದರು.
ಅಣ್ಣಾ ಹಜಾರೆಗೆ ಹೋಲಿಸಬೇಡಿ : ಬಾಬಾ ರಾಮದೇವ್ ಅವರನ್ನು ಗಾಂಧಿವಾದಿ ಅಣ್ಣಾ ಹಜಾರೆಯೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಣ್ಣಾ ಹಜಾರೆಯವರು ದೇಶ, ಜನರ ಬಗ್ಗೆ ಕಾಳಜಿ ಹೊಂದಿರುವ ಹಾಗೂ ದೇಶಕ್ಕಾಗಿ ಎಲ್ಲವನ್ನೂ ಸಮರ್ಪಿಸಿರುವ ಗಾಂಧಿವಾದಿ ಆದರೆ ರಾಮದೇವ್ ಅದ್ಯಾವುದೂ ಅಲ್ಲದ ಸಂತ ಕಂ ರಾಜಕಾರಣಿ ಎಂದು ಅವರು ಗುಡುಗಿದರು.
ಪೇಜಾವರ ಶ್ರೀಗಳ ಬಗ್ಗೆ ಹರಿಹಾಯ್ದ ವಿಶ್ವನಾಥ್‌ರವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಪೇಜಾವರ ಶ್ರೀಗಳು ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಬಾಬಾರವರೊಂದಿಗೆ ಪಾಲ್ಗೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣವನ್ನು ವಾಪಾಸ್ಸು ತರುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಈಗಾಗಲೇ ಸುಮಾರು 15 ರಾಷ್ಟ್ರಗಳು ಅಪರಾಧಿಗಳು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಪರಸ್ಪರ ವಿನಿಮಯ ಮಾಡಿಕೊಳ್ಳಲು ಮುಂದಾಗಿವೆ. ಸ್ವಿಸ್ ಬ್ಯಾಂಕಿನಲ್ಲಿ ಇಡಲಾಗಿದೆ ಎನ್ನಲಾಗುವ ಕಪ್ಪು ಹಣವನ್ನು ಪಡೆಯಬೇಕಾದರೆ ಅಲ್ಲಿನ ಸಂವಿಧಾನದ ಒಪ್ಪಿಗೆ ಪಡೆಯಬೇಕಾಗುತ್ತದೆ ಆದ್ದರಿಂದ ಒಂದಷ್ಟು ಕಾಲಾವಕಾಶ ಬೇಕು ಎಂದು ಹೇಳಿದರು.












Click it and Unblock the Notifications