ಹಳೆ ದ್ವೇಷ, ಅನೈತಿಕ ಸಂಬಂಧ: ಬೆಂಗಳೂರಿನಲ್ಲಿ ವ್ಯಕ್ತಿ ಹತ್ಯೆ

ಮುನಾವರ್ ಬಾಷಾ ಎಂಬುವರ ಮಗನಾದ ಇಸ್ಮಾಯಿಲ್ ಜೆಸಿ ರಸ್ತೆ ನಿವಾಸಿ. ಸುಧಾಮನಗರದ ನಾಲ್ಕನೇ ಬ್ಲಾಕ್‌ನ ಮೊದಲನೇ ತಿರುವಿನಲ್ಲಿ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮಹಿಳೆಯರ ಜತೆ ಮಾತನಾಡುತ್ತ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಏಕಾಏಕಿ ದಾಳಿ ನಡೆಸಿದ್ದಾರೆ.
ಮಚ್ಚು, ಲಾಂಗ್‌ಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ ಇಸ್ಮಾಯಿಲ್ ನನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಇಸ್ಮಾಯಿಲ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಮಾಯಿಲ್ ಗೆ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಪತ್ನಿ ಜತೆ ಜಗಳ ಮಾಡಿಕೊಂಡಿದ್ದ. ವೆಲ್ಡಿಂಗ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ ಸರಿಯಾಗಿ ಮನೆಗೂ ಬರುತ್ತಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಅವನಿಗೆ ಚಾಕು ಇಸ್ಮಾಯಿಲ್ ಎಂದೂ ಕರೆಯುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಾಡಹಗಲೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ ಪರಿಣಾಮ ಸುಧಾಮನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್, ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ, ಹಲಸೂರು ಉಪ ವಿಭಾಗದ ಎಸಿಪಿ ಗಚ್ಚಿನಕಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications