ಮೂರು ವರುಷ ಅಭಿವೃದ್ಧಿ ಹರುಷ ಹಿನ್ನೋಟ

ಅಭಿವೃದ್ಧಿಯೇ ಆಡಳಿತ ಮಂತ್ರ ಎನ್ನುವ ಸರ್ಕಾರದ ಘೋಷ ವಾಕ್ಯದ ಮುಂದೆ ಸ್ವಂತ ಎಂದು ಸೇರಿಸಿ ವಿಪಕ್ಷಗಳು ಗೇಲಿ ಮಾಡಿದ್ದವು. ವಿಪಕ್ಷಗಳ ಕಾಟ ಇಲ್ಲದಿದ್ದರೆ ಇನ್ನಷ್ಟು ಅಭಿವೃದ್ಧಿಯನ್ನು ಸುಖ ನೆಮ್ಮದಿಯನ್ನು ನಾಡಿನ ಜನತೆ ಕಾಣುತ್ತಿದ್ದರು ಎಂದು ಯಡಿಯೂರಪ್ಪ ಅವರು ನೊಂದು ನುಡಿದರು. ಅಪರೇಷನ್ ಕಮಲ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡದ ಜಾರಿಕೊಂಡ ಸಿಎಂ, ಸರ್ಕಾರವನ್ನು ಹೊಗಳುವುದರಲ್ಲಿ ಮಗ್ನರಾದರು.
ಕಷ್ಟದ ದಿನಗಳಲ್ಲಿ ತಂತ್ರಗಾರಿಕೆ: ಸ್ವಜನ ಪಕ್ಷಪಾತದ ಗಂಭೀರ ಆರೋಪ ಎದುರಿಸಿದರೂ ಪಟ್ಟು ಬಿಡದೆ ಕುರ್ಚಿಗೆ ಅಂಟಿಕೊಂಡು ಅನಧಿಕೃತವಾಗಿ ಫೆವಿಕಲ್ ಜಾಹೀರಾತಿಗೆ ಯಡಿಯೂರಪ್ಪ ರೂಪದರ್ಶಿಯಾಗಿಬಿಟ್ಟಿದ್ದರು. ಪಕ್ಷದ ರಾಷ್ಟ್ರೀಯ ನಾಯಕರಿಂದಲೂ ಶಮನಗೊಳಿಸಲಾಗದ ಆಂತರಿಕ ಭಿನ್ನಮತಕ್ಕೆ ಕ್ಯಾರೇ ಎನ್ನದೇ ಬಂಡಾಯಗಾರರಲ್ಲಿ ಒಡಕು ಮೂಡಿಸಿ ಯಡಿಯೂರಪ್ಪ ಜಾಣ್ಮೆಯಿಂದ ಪಕ್ಷ ಹಾಗೂ ಸರ್ಕಾರವನ್ನು ಉಳಿಸಿದರು.ಎರೆಡೆರಡು ಬಾರಿ ನೆತ್ತಿಯ ಮೇಲೆ ರಾಷ್ಟ್ರಪತಿ ಆಡಳಿತ ಜಾರಿ ತೂಗುಕತ್ತಿ ತೂರಾಡಿದರೂ ಅಂಜದೆ ಅಳುಕದೆ ರಾಜ್ಯಪಾಲರನ್ನು ಎದುರಿಸಿದ ಕೀರ್ತಿ ಬಿಎಸ್ ವೈ ಅವರಿಗೆ ಸಲ್ಲುತ್ತದೆ.
ಸಾಧನೆಗಳು : ಪ್ರಪ್ರಥಮ ಕೃಷಿ ಬಜೆಟ್ ಮಂಡನೆ, ರೈತರಿಗೆ ಶೇಕಡ 1ರ ಬಡ್ಡಿ ದರದಲ್ಲಿ ಸಾಲ, ಭಾಗ್ಯ ಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ಆರೋಗ್ಯ ಕವಚ, ವಾಜಪೇಯಿ ಆರೋಗ್ಯ ಶ್ರೀ, ವೃದ್ಧರು, ವಿಧವೆಯರು ಮತ್ತಿತರರಿಗೆ ಮಾಸಾಶನ ವಿತರಣೆ ಇತ್ಯಾದಿ. ಲೋಕಸಭೆ, ರಾಜ್ಯಸಭೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಜೊತೆಗೆ ಎಲ್ಲಾ ಉಪ ಚುನಾವಣೆಗಳಲ್ಲೂ ಬಿಜೆಪಿಗೆ ಭರ್ಜರಿ ಯಶಸ್ಸು ದೊರೆಕಿದ್ದು ದೊಡ್ಡ ಸಾಧನೆಯೇ. ವಿಶ್ವ ಬಂಡವಾಳ ಹೂಡಿಕೆದಾರರ ಯಶಸ್ವಿ ಸಮಾವೇಶ, ಲಕ್ಷಾಂತರ ಗ್ರಾಮೀಣ ಯುವಕ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ತರಬೇತಿ, ವಿಶ್ವ ಕನ್ನಡ ಸಮ್ಮೇಳನ ಆಯೋಜನೆ.
ಜಾತಿ ಬೆಂಬಲ: ಲಿಂಗಾಯಿತರ ಬೆಂಬಲ ಕಳೆದುಕೊಂಡರೆ ಕರ್ನಾಟಕದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸಂದರ್ಭ ಎದುರಾಗುವ ಸಾಧ್ಯತೆ ಇದೆ ಎಂಬ ವಿಷಯ ಹೈಕಮಾಂಡ್ ನಿದ್ದೆಗೆಡಿಸಿಬಿಟ್ಟಿತ್ತು. ಇದು ಯಡಿಯೂರಪ್ಪ ಅವರಿಗೆ ವರವಾಗಿ ಪರಿಣಮಿಸಿ, ಲಿಂಗಾಯಿತ ಶಾಸಕರು, ಸಚಿವರನ್ನು ಒಟ್ಟು ಮಾಡಿ ಬಲಾಬಲ ಪ್ರದರ್ಶನಕ್ಕೂ ಯಡಿಯೂರಪ್ಪ ಸಿದ್ಧರಾಗಿಬಿಟ್ಟಿದ್ದರು. ಜೊತೆಗೆ ಲಿಂಗಾಯತ ಮಠ ಮಾನ್ಯಗಳಿಗೆ ಧಾರಾಳವಾಗಿ ಕಪ್ಪ ಕಾಣಿಕೆ ಸಲ್ಲಿಸಿ ಜಾತಿ ಬೆಂಬಲ ಗಿಟ್ಟಿಸಿಕೊಂಡು ಮತ್ತೊಮ್ಮೆ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮುಂದಿರುವ ಸವಾಲುಗಳು: ಏಳು ಸಚಿವ ಸ್ಥಾನಗಳು ಖಾಲಿಯಿದ್ದು, ಬಾಕಿ ಉಳಿದಿರುವ ಸಂಪುಟ ವಿಸ್ತರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಯಡಿಯೂರಪ್ಪ ಅವರ ಮುಂದಿರುವ ದೊಡ್ಡ ಸವಾಲು. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಯಡಿಯೂರಪ್ಪ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರ ವಿರುದ್ಧ ಕಾನೂನು ಸಮರ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications