ಮುಮಂ ಯಡಿಯೂರಪ್ಪನವರಿಗೆ 11 ಫ್ರೀ ಸಲಹೆಗಳು

ಕರ್ನಾಟಕದ ಪತ್ರಿಕೆಗಳು ವರದಿ ಮಾಡಿರುವಂತೆ ಯಡಿಯೂರಪ್ಪ ಅವರು ಗೆದ್ದು ಬಂದ ಕಂಟಕಗಳು ಸುಮಾರು 13 ರಿಂದ 15. ನಾವಂತೂ ಲೆಕ್ಕ ಇಟ್ಟಿಲ್ಲ. ಲೆಕ್ಕ, ಜಮಾ ಇಲ್ಲದ ಈ ಕಾಲದಲ್ಲಿ ಇವೆಲ್ಲ ಯಾವ ಲೆಕ್ಕ. ಪರಂತು, ನಿನ್ನೆ ಮೇ 29 ಭಾನುವಾರಕ್ಕೆ ಬಿಜೆಪಿ ಸರಕಾರಕ್ಕೆ 3 ವರ್ಷಗಳು ತುಂಬಿದವು. ಕಷ್ಟಕೋಟಲೆಗಳನ್ನು ದಾಟಿ ಸರಕಾರವನ್ನಷ್ಟೇ ಅಲ್ಲ, ತಮ್ಮ ಕುರ್ಚಿಯನ್ನೂ ಉಳಿಸಿಕೊಂಡು ಬಂದ ಬಿಎಸ್ ವೈ ಅವರಿಗೆ ಮೂರನೇ ಸರಕಾರಿ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳದೇ ಅನ್ಯ ಮಾರ್ಗವಿಲ್ಲ.
ಯಡಿಯೂರಪ್ಪ ಅವರಿಗೆ ಇನ್ನೂ ಎರಡು ವರ್ಷಗಳ ಕಾಲಾವಧಿ ಇದೆ. ಅದನ್ನು ಶತಾಯಗತಾಯ ಪೂರೈಸುವುದಾಗಿ ಅವರು ಕನಿಷ್ಠ ಪಕ್ಷ ನೂರೆಂಟು ಸಲ ಹೇಳಿಕೊಂಡಿದ್ದಾರೆ. ಬಿಜೆಪಿ ಸರಕಾರ ಐದು ವರ್ಷ ಪೂರೈಸಲಿ, ರಾಜ್ಯದಲ್ಲಿ ದುರಾಡಳಿತ ತೊಲಗಿ ಒಳ್ಳೆಯ ಆಡಳಿತ ಬರಲಿ ಎಂಬ ಹಾರೈಕೆ ನಮ್ಮದು. ಮೊನ್ನೆ ಶನಿವಾರ ಅಣ್ಣಾ ಹಜಾರೆ ಹೇಳಿದಂತೆ ಶುದ್ಧ ಆಚಾರ್, ಶುದ್ಧ ವಿಚಾರ್, ಔರ್ ನಿಷ್ಕಳಂಕ್ ಜೀವನ್ ಸಮಸ್ತ ಕನ್ನಡಿಗರ ಹೆಮ್ಮೆಯ ಆಸ್ತಿಯಾಗಲಿ ಎಂದು ಹಾರೈಸೋಣ.
ಈಗಿನ ಕಾಲದಲ್ಲಿ ಎಡಿಟೋರಿಯಲ್ಲುಗಳಿಗೆ ಮಾವಿನ ಕಾಯಿ ಉದುರುವುದಿಲ್ಲ. ಸದಾಚಾರ, ಸಚ್ಛಾರಿತ್ರ್ಯ ಪುಕ್ಕಟೆ ಬರುವುದಿಲ್ಲ. ಸ್ವಜನ ಪಕ್ಷಪಾತ, ಗುಂಪುಗಾರಿಕೆ ಮತ್ತು ತುಘಲಕ್ ದರ್ಬಾರು ಕೂಡ ಏಕಾಏಕಿ ದೂರವಾಗುವಂಥಹುದಲ್ಲ. ಅದಕ್ಕೆ ಒಂದು ಸಂಕಲ್ಪ ಬೇಕು. ಈ ಸಂಕಲ್ಪವನ್ನು ಬಿಜೆಪಿ ಸರಕಾರ ಪಾಲಿಸಿದರೆ 5 ವರ್ಷ ಪೂರೈಸುವುದಲ್ಲ, 50 ವರ್ಷ ಪೂರೈಸಲೂ ಸಾಧ್ಯ.
ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದು ಮಾತನ್ನು ಗಮನದಲ್ಲಿಡುವುದು ಲೇಸು. ನಿಜ ಹೇಳಬೇಕೆಂದರೆ ಅದು ಒಂದಲ್ಲ ಒಟ್ಟು ಹನ್ನೊಂದು ಮಾತುಗಳು. ಈ ಮಾತುಗಳು ಸರಕಾರಕ್ಕೆ ದಟ್ಸ್ ಕನ್ನಡ ನೀಡುತ್ತಿರುವ ಫ್ರೀ ಸಲಹೆಗಳೆಂದು ಭಾವಿಸಿದರೆ ಉಭಯತ್ರರಿಗೂ ಸಂತೋಷ. ಈ ಹನ್ನೊಂದು ಉಚಿತ ಸಲಹೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ: ಸ್ವೀಕರಿಸಿ.
1) ಮುಂಗೋಪ ಬಿಡಿ. ಕೋಪಕ್ಕೆ ಕುಯ್ದುಕೊಂಡ ಮೂಗನ್ನು ಮತ್ತೆ ಅಂಟಿಸಲಾಗದು.
2) ಶಾಸಕರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ವಿಶ್ವಾಸವೇ ಶ್ವಾಸ
3) ಮಕ್ಕಳನ್ನು ದೂರ ಇಡಿ. ಮಕ್ಕಳ ದೆಸೆಯಿಂದ ಯಾವ ರಾಜಕಾರಣಿಯೂ ಉದ್ದಾರವಾಗಿಲ್ಲ
4) ಗುಡಿ ಗುಂಡಾರಗಳಿಗೆ ನಿತ್ಯ ಹೋಗಿ ಬನ್ನಿ, ರಿಟೈರ್ ಆದ ನಂತರವೇ
5) ಸಾರ್ವಜನಿಕವಾಗಿ ಅದರಲ್ಲೂ ಕ್ಯಾಮರಾ ಮುಂದೆ ಅಳಬೇಡಿ, ಖಾಸಗಿಯಾಗಿಯೂ ಬೇಡ
6) ಅಣ್ಣಾ ಹಜಾರೆ ಮತ್ತೆ ಬೆಂಗ್ಳೂರ್ಗೆ ಬಂದರೆ ಕನಿಷ್ಠ ಅರ್ಧ ಕುಂಭ ಸ್ವಾಗತವನ್ನಾದರೂ ಕೋರಿರಿ
7) 5 ವರ್ಷ ಪೂರೈಸ್ತೀನಿ 5 ವರ್ಷ ಪೂರೈಸ್ತೀನಿ ಅಂತ ಪದೇಪದೇ ಹೇಳಿ ತಲೆ ಚಿಟ್ಟುಹಿಡಿಸಬೇಡಿ, ಪ್ಲೀಜ್
8) ವಾರಕ್ಕೊಮ್ಮೆ ಮೌನವ್ರತ ಆಚರಿಸಿರಿ, ಒಳಗಣ್ಣು ತೆರೆಯುತ್ತದೆ.
9) ದಕ್ಷ ಅಧಿಕಾರಿಗಳು ಇನ್ನೂ ಇದ್ದಾರೆ. ಅವರಿಗೆ ಫ್ರೀ ಹ್ಯಾಂಡ್ ಕೊಡಿ.
10) ಮಂತ್ರಿ ಮಹೋದಯರ ಕಾರ್ಯಕ್ಷಮತೆ ಬಗೆಗೆ ನಾವು ಮಾತನಾಡೆವು. ನೀವೇ ಹೇಳಿ.
11) ಈ ಸಲಹೆಗಳು ಬಾಲಿಶ ಎನಿಸಿದರೆ, ಕೂಡಲೇ ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿರಿ. ಆಲ್ ದ ಬೆಸ್ಟ್












Click it and Unblock the Notifications