ಸುಷ್ಮಾ ಸಮರ: ನಿತಿನ್ ಗಡ್ಕರಿ ಡ್ಯಾಮೇಜ್ ಕಂಟ್ರೋಲ್

ಕರ್ನಾಟಕಕ್ಕೆ ಸಂಬಂಧಿಸಿದಂತೆ ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ತೆಗೆದುಕೊಂಡ ಎಲ್ಲ ತೀರ್ಮಾನಗಳಿಗೂ ನನ್ನ ಸಮ್ಮತಿ ಇತ್ತು. ರೆಡ್ಡಿ ಸಹೋದರರನ್ನು ಮಂತ್ರಿ ಗಳನ್ನಾಗಿ ಮಾಡುವುದಕ್ಕೆ ಆ ಸಂದರ್ಭಲ್ಲಿ ಕೆಲವು ರಾಜಕೀಯ ಒತ್ತಡಗಳು ಇದ್ದವು' ಎಂದೂ ಗಡ್ಕರಿ ಹೇಳಿದ್ದಾರೆ.
ಲೋಕಸಭೆ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ತಮ್ಮ ಪಕ್ಷದ ಮುಖಂಡರಿಗೇ ಬಿಸಿ ಮುಟ್ಟಿಸಿದ್ದರು. ಬಳ್ಳಾರಿ ರೆಡ್ಡಿ ಸಹೋದರರ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ತಮ್ಮ ಸಹೊದ್ಯೋಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕಿ ಅರುಣ್ ಜೇಟ್ಲಿ ಮೇಲೆ ಆರೋಪ ಮಾಡಿದ್ದರು. ಸುಷ್ಮಾ ಏಕೆ ಸಮರದ ಹಾದಿ ತುಳಿದಿದ್ದಾರೆ ಎಂಬ ಕುರಿತು ಬಿಜೆಪಿ ನಾಯಕರು ಅಚ್ಚರಿಗೊಂಡಿದ್ದಾರೆ.
ಅಲ್ಲದೆ, ಯಡಿಯೂರಪ್ಪ ಅತ್ಯಂತ ನೆಮ್ಮದಿಯಾಗಿ ಮುಖ್ಯಮಂತ್ರಿ ಕುರ್ಚಿ ಯಲ್ಲಿ ಕುಳಿತಿರುವ ಸಂದರ್ಭದಲ್ಲಿ ರೆಡ್ಡಿಗಳ ಮಾತು ಏಕೆ ಬಂತು ಎಂಬುದೇ ಅರ್ಥವಾಗದ ಸಂಗತಿ. ಜೇಟ್ಲಿ ಅವರನ್ನು ಮಾತ್ರವಲ್ಲ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೂ ಸುಷ್ಮಾ ಕೆಣಕಿದ್ದರು. ಮೋದಿ ಯಾವುದನ್ನೂ ಇಟ್ಟುಕೊಳ್ಳದೆ ಸುಷ್ಮಾ ಅವರಿಗೆ ವಾಪಸ್ ಕೊಟ್ಟರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸುಷ್ಮಾ ಅವರ ನಡವಳಿಕೆ ಬಿಜೆಪಿ ನಾಯಕತ್ವಕ್ಕೆ ನುಂಗಲಾರದ ತುತ್ತಾಗಿದೆ. ಬಿಜೆಪಿ ಒಳಗಿನ ಗುಂಪುಗಾರಿಕೆಗೆ ಸಾಕ್ಷಿಯಾಗಿದೆ.
ಸುಷ್ಮಾ ಮತ್ತು ಜೇಟ್ಲಿ ನಡುವಣ ಶೀತಲ ಸಮರ ಹೊಸದೇನೂ ಅಲ್ಲ. ಈಗ ಅದು ಬೀದಿಗೆ ಬರುವ ಮೂಲಕ ಮತ್ತೊಂದು ಮಜಲು ಮುಟ್ಟಿದೆ. ಮಿಗಿಲಾಗಿ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಸುಷ್ಮಾ ಹೇಳಿಕೆ ಕರ್ನಾಟಕ ರಾಜಕಾರಣ ಕುರಿತದ್ದು. ಆದರೆ, ಪರಿಣಾಮ ಮಾತ್ರ ರಾಷ್ಟ್ರಮಟ್ಟದ್ದು. ಬಿಜೆಪಿ ಹಿರಿಯ ನಾಯಕಿ ಕಾರಣ ಅಥವಾ ಪ್ರಚೋದನೆಯೇ ಇಲ್ಲದೆ ಯಾಕೆ ಜೇಟ್ಲಿ ಕಾಲೆಳೆದಿದ್ದಾರೆ ಎಂಬ ಕುತೂಹಲದ ಚರ್ಚೆ ಈಗ ಎಲ್ಲೆಡೆ.
ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ಉತ್ತರಾಧಿಕಾರಿ ಸ್ಥಾನಕ್ಕಾಗಿ ಬಿಜೆಪಿಯೊಳಗೆ ನಡೆದಿರುವ ಕಿತ್ತಾಟ ಇದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಅಡ್ವಾಣಿ ರಾಜಕಾರಣದಲ್ಲಿ ಇನ್ನೂ ಸಕ್ರಿಯರಾಗಿರುವುದರಿಂದ ಉತ್ತರಾಧಿಕಾರಿ ಪ್ರಶ್ನೆ ಉದ್ಭವಿಸುವುದಿಲ್ಲ. ಅಲ್ಲದೆ, ಚುನಾವಣೆಗೆ ಇನ್ನೂ ಮೂರು ವರ್ಷ ಇದೆ.











Click it and Unblock the Notifications