ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಳ್ಳಿ ಪೊಲೀಸರೆ!

ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ಕೆಲ ಉಗ್ರರಿಂದ ಪಾಕಿಸ್ತಾನಕ್ಕೆ ಕರೆಗಳನ್ನು ಮಾಡುತ್ತಿರುವ ಅಂಶ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡನ್ನೂ ಬೆಚ್ಚಿ ಬೀಳಿಸಿದೆ. ಇವರಿಗೆ ಮೊಬೈಲನ್ನು ತಲುಪಿಸಿದವರಾರು? ಅವಕಾಶ ನೀಡಿದ್ದಾದರೂ ಹೇಗೆ? ತನಿಖೆ ನಡೆಯುತ್ತಿದೆ.
ಈ ವಿಷಯವನ್ನು ರಾಜ್ಯ ಗೃಹ ಸಚಿವ ಆರ್ ಅಶೋಕ್ ಅವರೇ ದೃಢಪಡಿಸಿದ್ದಾರೆ. ಈ ಕರೆಗಳನ್ನು ಮಾಡಿದ್ದು ಯಾರು, ಎಲ್ಲಿಂದ ಇವರಿಗೆ ಕರೆಗಳು ಬರುತ್ತಿವೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ದುಬೈ ಮತ್ತು ಕೆಲ ಗಲ್ಫ್ ದೇಶಗಳಿಂದಲೂ ಕರೆಗಳು ಬರುತ್ತಿರುವ ಮತ್ತು ಹೋಗುತ್ತಿರುವ ಶಂಕೆಯಿದೆ ಎಂದು ಅವರು ಹೇಳಿದ್ದಾರೆ. ಈಗ ಜಾಮ್ಮರ್ ಗಳನ್ನು ಅಳವಡಿಸಲು ಸರಕಾರ ನಿರ್ಧರಿಸಿದೆ.
ಬೆಂಗಳೂರು ಜೈಲಿನಲ್ಲಿ ಇಬ್ಬರು ಪಾಕ್ ಉಗ್ರರು ಸೇರಿದಂತೆ 15ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರು ಇದ್ದಾರೆ. ಜುಲೈ 25, 2008ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಟಿ ನಾಸಿರ್, ಸರ್ಫರಾಜ್ ನವಾಜ್ ಮತ್ತು ಅಬ್ದುಲ್ ಸತ್ತಾರ್ ಎಂಬುವವರು ಜೈಲು ಪಾಲಾಗಿದ್ದಾರೆ.
2006ರಲ್ಲಿ ಮೈಸೂರು ಪೊಲೀಸರಿಂದ ಬಂಧಿತರಾಗಿರುವ ಕರಾಚಿ ಮೂಲದ ಮೊಹಮ್ಮದ್ ಅಲಿ ಹುಸೇನ್ ಮತ್ತು ಮೊಹಮ್ಮದ್ ಫಹಾದ್ ಬೆಂಗಳೂರಿನ ಜೈಲಿನಲ್ಲಿದ್ದು, ಉಗ್ರ ಸಂಘಟನೆಯಾದ ಅಲ್ ಬದರ್ ಗೆ ಸೇರಿದವರಾಗಿದ್ದಾರೆ.
ಕೇಂದ್ರ ಬೇಹುಗಾರಿಕೆಯ ಈ ಆಘಾತಕಾರಿ ವರದಿ ತಡವಾಗಿ ಬಂದಿದೆಯಾದರೂ, ಈಗಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ಎಚ್ಚೆತ್ತುಕೊಳ್ಳುವುದು ಸೂಕ್ತ. ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ನಂತರ ಭಾರತವೂ ಸೇರಿದಂತೆ ವಿಶ್ವದಲ್ಲೆಲ್ಲಾ ಧ್ವಂಸ ಕೃತ್ಯ ಎಸಗುವುದಾಗಿ ಅಲ್ ಖೈದಾ ಹೇಳಿತ್ತು.












Click it and Unblock the Notifications