ವಿಧಾನಮಂಡಲದ ಅಧಿವೇಶನಕ್ಕೆ ಇಂದು ಅಂಕಿತ ಸಾಧ್ಯತೆ

ತಮ್ಮ ಶಿಫಾರಸಿನ ಬಗ್ಗೆ ಕೇಂದ್ರ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೂ ಅಧಿವೇಶನಕ್ಕೆ ಅನುಮತಿ ನೀಡುವುದಿಲ್ಲ ಎಂಬ ಧೋರಣೆ ರಾಜ್ಯಪಾಲರ ಹಂಸರಾಜ್ ಅವರದ್ದಾಗಿತ್ತು. ಇದೀಗ ಅವರ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು, ಸೋಮವಾರ ಅಧಿಕೃತವಾಗಿ ಮಾಹಿತಿ ರವಾನೆಯಾಗುವುದರಿಂದ ಅಧಿವೇಶನಕ್ಕೆ ಅನುಮತಿ ನೀಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಿ ರಾಜ್ಯಪಾಲರು ಈ ತಿಂಗಳ 16ರಂದು ಕಳುಹಿಸಿದ್ದ ವಿಶೇಷ ವರದಿಯನ್ನು ಭಾನುವಾರ ತಡರಾತ್ರಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸ್ಪಷ್ಟವಾಗಿ ತಿರಸ್ಕರಿಸಿದೆ.
ಈ ಬೆಳವಣಿಗೆಯಿಂದ ರಾಜ್ಯಪಾಲರ ಹಂಸರಾಜ್ ಭಾರಧ್ವಾಜ್ ಸೇರಿದಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತೀವ್ರ ಮುಖಭಂಗ ಉಂಟಾಗಿದ್ದು, ಬಿಜೆಪಿ ನಾಯಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಶತಾಯಗತಾಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲೇಬೇಕು ಎಂದು ಪಟ್ಟು ಹಿಡಿದು ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಪೈಕಿ ಕೆಲವರು ಭಾನುವಾರ ರಾತ್ರಿ ಬೆಂಗಳೂರಿಗೆ ವಾಪಸಾದರು. ಅವರು ವಾಪಸಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅವರ ಬೇಡಿಕೆಯನ್ನು ತಳ್ಳಿ ಹಾಕಿ ಬಿಜೆಪಿ ಸರ್ಕಾರಕ್ಕೆ ಜೀವದಾನ ನೀಡಿದೆ.











Click it and Unblock the Notifications