ಹಂಸ್ ಮೇಲೆ ರಾಯಚೂರಿನಲ್ಲಿ ಕೆಂಡ ಕಾರಿದ ಬಿಎಸ್ ವೈ

ಸಂವಿಧಾನದ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ತಮ್ಮ ರಾಜ್ಯಪಾಲರ ವಿರುದ್ಧದ ಹೋರಾಟಕ್ಕೆ ಯಡಿಯೂರಪ್ಪ ಚಾಲನೆ ನೀಡಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದ್ದರೂ, ಜನರಿಂದ ಬಹುಮತ ಪಡೆದು ಆಯ್ಕೆಯಾಗಿರುವ ಸರಕಾರವನ್ನು ಬೀಳಿಸಲು ರಾಜ್ಯಪಾಲರು ಹೊರಟಿದ್ದಾರೆ. ಅವರ ಉದ್ದೇಶ ಆರು ತಿಂಗಳು ವಿಧಾನಸಭೆಯಲ್ಲಿ ಕುಳಿತು ರಾಜ್ಯಭಾರ ಮಾಡುವುದಾಗಿದೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಅವರ ಜೊತೆಗಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು ಶ್ರೀ ಉರುಕುಂದ ಈರಣ್ಣ ಸ್ವಾಮಿ ಲಾರಿಯ ಮೇಲೆ ಹತ್ತಿ, ರಾಷ್ಟ್ರಪತಿ ಆಳ್ವಿಕೆಯ ಶಿಫಾರಸನ್ನು ವಿರೋಧಿಸಬೇಕೆಂದು ಜನರಲ್ಲಿ ಮನವಿ ಮಾಡಿದರು. ಬಿಜೆಪಿಯ ಹೋರಾಟವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಒಟ್ಟು ಎರಡು ತಂಡಗಳನ್ನು ಕಟ್ಟಿದ್ದು, ಒಂದೊಂದು ತಂಡಕ್ಕೆ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ನೇತೃತ್ವ ವಹಿಸಿದ್ದಾರೆ. ಯಡಿಯೂರಪ್ಪ ರಾಯಚೂರು (ಮೇ 21), ಮಂಗಳೂರು (ಮೇ 22), ತುಮಕೂರು (ಮೇ 23), ಕೋಲಾರ (ಮೇ 24) ಮತ್ತು ಬಾಗಲಕೋಟ (ಮೇ 25) ಸಂಚರಿಸಲಿದ್ದಾರೆ. ಈಶ್ವರಪ್ಪ ಮೈಸೂರು (ಮೇ 21), ಚಿತ್ರದುರ್ಗ ಮತ್ತು ಬಳ್ಳಾರಿ (ಮೇ 22), ಕೊಪ್ಪಳ (ಮೇ 23), ಗುಲಬರ್ಗಾ (ಮೇ 24) ಮತ್ತು ಬೀದರ್ (ಮೇ 25)ಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.











Click it and Unblock the Notifications